ರೈಲು ಅಪಘಾತದಲ್ಲಿ ಮೃತ ವ್ಯಕ್ತಿ ಕುಟುಂಬಕ್ಕೆ ವಿಮಾ ಹಣ ನೀಡಲು ಆದೇಶ

| Published : Aug 09 2025, 12:00 AM IST

ರೈಲು ಅಪಘಾತದಲ್ಲಿ ಮೃತ ವ್ಯಕ್ತಿ ಕುಟುಂಬಕ್ಕೆ ವಿಮಾ ಹಣ ನೀಡಲು ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ರೈಲ್ವೆ ಸ್ಟೇಶನನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರೈಲು ಯಶವಂತಪುರನ್ನು 2023ರ ಫೆಬ್ರುವರಿ 4 ರಂದು ರಾತ್ರಿ 11.50ಕ್ಕೆ ಬಿಟ್ಟಿತ್ತು ಮಧ್ಯರಾತ್ರಿ ಸುಧೀಂದ್ರ ಶೌಚಾಲಯಕ್ಕೆ ಹೋದಾಗ ರೈಲಿನ ಬೋಗಿಯ ಬಾಗಿಲು ಬಡಿದ ಕಾರಣ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದರು.

ಧಾರವಾಡ: ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿಯ ಸೌತ್‌ ವೆಸ್ಟರ್ನ್ ರೈಲ್ವೆಗೆ ವಿಮಾ ಹಣ ಕೊಡಲು ಇಲ್ಲಿಯ ಗ್ರಾಹಕ ಆಯೋಗವು ಆದೇಶಿಸಿದೆ.

ಹುಬ್ಬಳ್ಳಿಯ ಕೇಶವನಗರದ ನಿವಾಸಿ ಕೀರ್ತಿವತಿ ತಮ್ಮ ಪತಿ ಸುಧೀಂದ್ರ ಕುಲಕರ್ಣಿ ಜೊತೆ ಯಶವಂತಪುರ ರೈಲ್ವೆ ಸ್ಟೇಶನನಿಂದ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದರು. ರೈಲು ಯಶವಂತಪುರನ್ನು 2023ರ ಫೆಬ್ರುವರಿ 4 ರಂದು ರಾತ್ರಿ 11.50ಕ್ಕೆ ಬಿಟ್ಟಿತ್ತು ಮಧ್ಯರಾತ್ರಿ ಸುಧೀಂದ್ರ ಶೌಚಾಲಯಕ್ಕೆ ಹೋದಾಗ ರೈಲಿನ ಬೋಗಿಯ ಬಾಗಿಲು ಬಡಿದ ಕಾರಣ ಆಯ ತಪ್ಪಿ ಬಿದ್ದು ಮೃತಪಟ್ಟಿದ್ದರು.

ಬೋಗಿಯಲ್ಲಿ ಯಾವುದೇ ಟಿಟಿ, ಗಾರ್ಡ್ ಇರದೇ ಮತ್ತು ಬಾಗಿಲನ್ನು ಮುಚ್ಚದ ಕಾರಣ ಈ ಅವಘಡ ನಡೆದಿದೆ. ರೈಲ್ವೆ ದುರ್ಘಟನೆಯಲ್ಲಿ ಮೃತವಾದರೆ ರೈಲ್ವೆ ಇಲಾಖೆಯಿಂದ ಮೃತನ ಕುಟುಂಬಕ್ಕೆ ₹8 ಲಕ್ಷ ಪರಿಹಾರ ಕೊಡುವ ನಿಯಮವಿದೆ ಮತ್ತು ಅದನ್ನು ಅವರು ರೈಲ್ವೆ ಕಾಯಿದೆ ಪ್ರಕಾರ ರೈಲ್ವೆ ಟ್ರಿಬುನಲ್‌ನಲ್ಲಿ ದಾವೆ ಹಾಕಿ ಅದನ್ನು ಪಡೆಯಬೇಕು ಮತ್ತು ಗ್ರಾಹಕರ ಆಯೋಗದಲ್ಲಿ ಅವರು ವಿಮಾ ಹಣವನ್ನು ಕೇಳಲು ಅರ್ಹರಲ್ಲ ಎಂದು ಮೃತನ ವಿಮಾ ಹಣವನ್ನು ಕೊಡಲು ರೈಲ್ವೆ ಇಲಾಖೆ ನಿರಾಕರಿಸಿತ್ತು.

ಎದುರುದಾರರ ಈ ನಡುವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಎಂದು ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು. ದೂರು ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ದೂರುದಾರರ ಪತಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ನಿರ್ಲಕ್ಷತನದಿಂದ ಮೃತ ಹೊಂದಿರುವುದು ಆಯೋಗದ ಗಮನಕ್ಕೆ ಕಂಡು ಬಂದಿದೆ. ಅಲ್ಲದೇ ರೈಲ್ವೆ ಇಲಾಖೆಯವರು ಅದನ್ನು ಒಪ್ಪಿದೆ. ಆದರೆ, ವಿಮಾ ಹಣವನ್ನು ದೂರುದಾರರು ರೈಲ್ವೆ ಟ್ರಿಬುನಲ್‌ನಲ್ಲಿ ಪಡೆಯಬೇಕೆಂದು ಮತ್ತು ಗ್ರಾಹಕರ ಆಯೋಗದ ವ್ಯಾಪ್ತಿಯಲ್ಲಿ ಪಡೆಯಲು ಬರುವುದಿಲ್ಲ ಎಂದು ಕ್ಲೇಮ್‌ ನಿರಾಕರಿಸಿರುವುದನ್ನು ಅಲ್ಲಗಳೆದ ಆಯೋಗವು, ದೂರುದಾರರು ಗ್ರಾಹಕನಾಗಿದ್ದು, ಗ್ರಾಹಕರ ವ್ಯಾಪ್ತಿಗೆ ಬರುತ್ತದೆ ಎಂದು ಆಯೋಗ ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.

ವಿಮಾ ಹಣ ₹8 ಲಕ್ಷ ಹಣವನ್ನು ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರಿಗೆ ಪಾವತಿಸುವಂತೆ ಆದೇಶಿಸಿದೆ. ಜತೆಗೆ ₹10 ಸಾವಿರ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಎದುರುದಾರರಾದ ಸೌತ್ ವೆಸ್ಟರ್ನ್ ರೈಲ್ವೆ ಹುಬ್ಬಳ್ಳಿಗೆ ಆಯೋಗ ನಿರ್ದೇಶಿಸಿದೆ.