ಸಾರಾಂಶ
ಗಣಿಗಾರಿಕೆಗೆ ಅನುಮತಿ ನೀಡಿದರೆ, ಅನುಮೋದನೆಗಳನ್ನು ಕೊಡಲಾಗಿದೆಯೇ ಎಂದು ವರದಿಯಲ್ಲಿ ಉಲ್ಲೇಖಿಸಬಹುದು ಎಂದು ಎನ್‌ಜಿಟಿ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ಹೊನ್ನಾವರ: ಜಿಲ್ಲೆಯ ಕರಾವಳಿ ವಲಯದ ಶರಾವತಿ ನದಿಯಲ್ಲಿ ಮರಳು ಗಣಿಗಾರಿಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೋಮವಾರ ಮಧ್ಯಂತರ ಆದೇಶ ನೀಡಿದೆ. ಯಾವುದೇ ಕಾನೂನುಬಾಹಿರ ಚಟುವಟಿಕೆಯನ್ನು ತಕ್ಷಣವೇ ಪರಿಶೀಲಿಸಲು ಮತ್ತು ನಿಲ್ಲಿಸಲು ನ್ಯಾಯಮಂಡಳಿ ಸೂಚಿಸಿದೆ.
ಚೆನ್ನೈನ ದಕ್ಷಿಣ ವಲಯದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೇ 24ರಂದು ಪ್ರಕರಣದ ವಿಚಾರಣೆ ಇಡಲಾಗಿತ್ತು. ವಿಚಾರಣೆ ವೇಳೆ ಎಸ್‌ಇಐಎಎ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ವಲಯದ ಶರಾವತಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡಲು ಯಾವುದೇ ಪರಿಸರ ಅನುಮತಿ ನೀಡಿಲ್ಲ ಎಂದು ಹೇಳಿದ್ದರು.ಗಣಿ ಮತ್ತು ಭೂವಿಜ್ಞಾನ ಇಲಾಖೆಯು, ತಾವು ನೀಡಿದ ಸಾರಿಗೆ ರವಾನೆ ಪರವಾನಗಿಗಳು ಈಗಾಗಲೇ ಅಗೆದಿರುವ ಮರಳಿನ ಸ್ಟಾಕ್‌ಯಾರ್ಡ್‌ಗೆ ಸಂಬಂಧಿಸಿವೆಯೇ ಅಥವಾ ಹೊಸದಾಗಿ ಗಣಿಗಾರಿಕೆ ಮಾಡಿದ ಮರಳಿಗೆ ಸಂಬಂಧಿಸಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ ಎಂದಿದ್ದರು. ಮುಂದಿನ ವಿಚಾರಣೆಯ ದಿನಾಂಕದ ಮೊದಲು ವಿವರವಾದ ವರದಿಯನ್ನು ಸಲ್ಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಎಸ್ಇಐಎಎಗೆ ನಿರ್ದೇಶಿಸಿದೆ. ಗಣಿಗಾರಿಕೆಗೆ ಅನುಮತಿ ನೀಡಿದರೆ, ಅನುಮೋದನೆಗಳನ್ನು ನೀಡಲಾಗಿದೆಯೇ ಎಂದು ವರದಿಯಲ್ಲಿ ಉಲ್ಲೇಖಿಸಬಹುದು ಎಂದು ಎನ್‌ಜಿಟಿ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.