ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಕಳೆದ ಆರು ತಿಂಗಳ ಹಿಂದೆ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅನುಪಾಲನಾ ವರದಿ ನೀಡದ 14 ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು ಶಾಸಕ ಡಿ. ರವಿಶಂಕರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಪಟ್ಟಣದ ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ತಕ್ಷತೆ ವಹಿಸಿ ಮಾತನಾಡಿದ ಅವರು, ಮುಂದೆ ಇದೇ ಚಾಳಿ ರೂಢಿಸಿಕೊಂಡರೆ ಎಲ್ಲರನ್ನು ಎತ್ತಂಗಡಿ ಮಾಡಿಸುವುದಾಗಿ ಗುಡುಗಿದರು.
ಅಬಕಾರಿ, ಪೊಲೀಸ್, ರೇಷ್ಮೆ, ಪುರಸಭೆ, ಕಂದಾಯ, ಅಕ್ಷರ ದಾಸೋಹ, ಮುದ್ರಾಂಕ ಇಲಾಖೆ, ಭೂ ಮಾಪನ ಇಲಾಖೆ, ಸಾರಿಗೆ ಇಲಾಖೆ, ಅಕ್ಷರ ದಾಸೋಹ, ಆರ್ ಟಿಒ, ಜಲ ಸಂಪನ್ಮೂಲ, ಮೀನುಗಾರಿಕಾ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದು ಇನ್ನೊಂದು ವಾರದಲ್ಲಿ ವರದಿ ಸಲ್ಲಿಸಬೇಕೆಂದು ಆದೇಶಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕೆಲವು ಸಿಬ್ಬಂದಿ ರೋಗಿಗಳೊಂದಿಗೆ ಸಭ್ಯತೆಯಿಂದ ವರ್ತಿಸುತ್ತಿಲ್ಲ ಎಂಬ ವ್ಯಾಪಕ ದೂರುಗಳಿದ್ದು, ಈ ಬಗ್ಗೆ ಗಮನ ಹರಿಸುವುದರ ಜತೆಗೆ ಆಂಬುಲೆನ್ಸ್ ಚಾಲಕರಿಬ್ಬರು ವಾಹನವನ್ನು ಸ್ವಂತಕ್ಕೆ ಬಳಸಿಕೊಂಡ ದೂರು ಬಂದಿದ್ದು ಕೂಡಲೆ ಅವರನ್ನು ಅಮಾನತ್ತು ಮಾಡಿ ನನಗೆ ವರದಿ ನೀಡಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಿ.ಜೆ. ನವೀನ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಅನುಕೂಲಕ್ಕೆ ಅನುಗುಣವಾಗಿ ಭತ್ತದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವುದರ ಜತೆಗೆ ರಸ ಗೊಬ್ಬರ ಮತ್ತು ಬಿತ್ತನೆ ಬೀಜಗಳ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ದರಪಟ್ಟಿ ಪ್ರದರ್ಶಿಸುವಂತೆ ಸೂಚಿಸಿ ಹೆಚ್ಚು ದರಕ್ಕೆ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು ಪಡಿಸಿ ಎಂದು ಸಹಾಯಕ ಕೃಷಿ ನಿರ್ದೇಶಕರಿಗೆ ತಿಳಿಸಿದರು.ಪಟ್ಟಣದ ಹಾಸನ -ಮೈಸೂರು ರಸ್ತೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ವಸತಿ ಗೃಹಗಳು ಮತ್ತು ಹಳೆಯ ಪ್ರವಾಸಿ ಮಂದಿರವನ್ನು ಕೆಡವಲು ಅಂದಾಜು ಪಟ್ಟಿ ತಯಾರಿಸಬೇಕು ಜತೆಗೆ ತಾಪಂ ಕಚೇರಿಯನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡಲು ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಅನುಮೋದನೆಗೆ ಕಳುಹಿಸಿದ್ದು ಆ ಬಗ್ಗೆ ಅಪಾರ ಜನಪ್ರಿಯತೆಯನ್ನು ಹರಿಸಬೇಕೆಂದು ಲೊಕೋಪಯೋಗಿ ಎಇಇ ಗೆ ಸೂಚಿಸಿದರು.
ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕು ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 7ನೇ ಸ್ಥಾನದಲ್ಲಿತ್ತು, ಈ ಬಾರಿ 4 ನೇ ಸ್ಥಾನ ಗಳಿಸಿದೆ ಎಂದು ಬಿಇಒ ಆರ್. ಕೃಷ್ಣಪ್ಪ ಮಾಹಿತಿ ನೀಡಿದಾಗ ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು, ಈ ಸಾಲಿನಲ್ಲಿ ಮೊದಲ ಸ್ಥಾನಕ್ಕೇರಲು ಪ್ರಯತ್ನಿಸಿ ಅದಕ್ಕೆ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.ಕ್ಷೇತ್ರದ ವ್ಯಾಪ್ತಿಯಲ್ಲಿ ಸಮರ್ಪಕ ಸಾರಿಗೆ ಸೇವೆ ಒದಗಿಸಿ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಗಮನ ಹರಿಸಿ ಯಾವುದೇ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತರಬೇಕೆಂದು ಡಿಪೋ ಮ್ಯಾನೇಜರ್ ಪಿ.ಮಹೇಶ್ ಅವರಿಗೆ ನಿರ್ದೇಶನ ನೀಡಿದರು.
ತಾಪಂ ಇಒ ಜಿ.ಕೆ. ಹರೀಶ್, ಜಿಪಂ ಸಹಾಯಕ ಯೋಜನಾಧಿಕಾರಿ ಸುಬ್ರಹ್ಮಣ್ಯ ಶರ್ಮ, ತಹಸೀಲ್ದಾರ್ ಗಳಾದ ಸಿ.ಎಸ್. ಪೂರ್ಣಿಮ, ನರಗುಂದ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಬಿ.ಜೆ. ನವೀನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಡಾ. ಜಯಣ್ಣ, ಸಹಾಯಕ ಕೃಷಿ ನಿರ್ದೇಶಕ. ಕೆ.ಜೆ. ಮಲ್ಲಿಕಾರ್ಜುನ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸುಮಿತ, ವಿನುತ್, ಎಸ್. ರಾಜಾರಾಂ ವೈಲಾಯ, ಅರ್ಕೇಶ್ವರಮೂರ್ತಿ, ಗುರುರಾಜ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ಟಿ.ವಿ. ಹರಿಪ್ರಸಾದ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಶ್ಮಿ, ಬಿಇಒ ಆರ್. ಕೃಷ್ಣಪ್ಪ, ಡಿಪೋ ವ್ಯವಸ್ಥಾಪಕ ಪಿ. ಮಹೇಶ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎಂ.ಅಶೋಕ್, ಸಿಡಿಪಿಒ ಸಿ.ಎಂ.ಅಣ್ಣಯ್ಯ, ಎಡಿಎಲ್ಆರ್ ಶ್ರೀಕಂಠಶರ್ಮ, ತಾಪಂ ಮೇಲ್ವಿಚಾರಕರಾದ ಅನೂಪ್, ಭರತ್, ನರೇಗಾ ನೋಡಲ್ ಅಧಿಕಾರಿ ಭಾಸ್ಕರ್, ಪ್ರಥಮ ದರ್ಜೆ ಗುಮಾಸ್ತ ಕರೀಗೌಡ ಇದ್ದರು.