ತಿಳವಳ್ಳಿ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ

| Published : Jul 18 2025, 12:45 AM IST

ಸಾರಾಂಶ

ಗುರುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಾನಗಲ್ಲ ತಾಲೂಕು ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ ದೊಡ್ಡ ತಾಲೂಕುಗಳಲ್ಲಿ ಒಂದಾಗಿದೆ. ತಾಲೂಕು ದೊಡ್ಡದಾಗಿದ್ದರೂ ಹಾನಗಲ್ಲ ಮತ್ತು ಆಡೂರಿನಲ್ಲಿ ಮಾತ್ರ ಪೊಲೀಸ್ ಠಾಣೆಗಳಿದ್ದವು. ಇದರಿಂದ ಪೊಲೀಸ್ ಇಲಾಖೆಯ ಮೇಲೆ ಹೊರೆ ಹೆಚ್ಚಿತ್ತು ಎಂದಿದ್ದಾರೆ.

ಹಾನಗಲ್ಲ: ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ತಾಲೂಕಿನ ತಿಳವಳ್ಳಿ ಹೊರಠಾಣೆಯನ್ನು ಪೂರ್ಣಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಹಲವು ದಶಕಗಳ ಕನಸು ನನಸಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದ್ದಾರೆ.ಗುರುವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಹಾನಗಲ್ಲ ತಾಲೂಕು ಹೆಚ್ಚು ಗ್ರಾಮಗಳನ್ನು ಒಳಗೊಂಡಿರುವ ದೊಡ್ಡ ತಾಲೂಕುಗಳಲ್ಲಿ ಒಂದಾಗಿದೆ. ತಾಲೂಕು ದೊಡ್ಡದಾಗಿದ್ದರೂ ಹಾನಗಲ್ಲ ಮತ್ತು ಆಡೂರಿನಲ್ಲಿ ಮಾತ್ರ ಪೊಲೀಸ್ ಠಾಣೆಗಳಿದ್ದವು. ಇದರಿಂದ ಪೊಲೀಸ್ ಇಲಾಖೆಯ ಮೇಲೆ ಹೊರೆ ಹೆಚ್ಚಿತ್ತು. ಸರ್ಕಾರ ಹೊರಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಕೈ ತೊಳೆದುಕೊಳ್ಳದೇ ದೈನಂದಿನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಪಿಎಸ್‌ಐ, ಎಎಸ್‌ಐ, ಸಿಎಚ್‌ಸಿ, ಸಿಪಿಸಿ, ಚಾಲಕ ಸೇರಿದಂತೆ ಅಗತ್ಯ ಹುದ್ದೆಗಳಿಗೂ ಮಂಜೂರಾತಿ ನೀಡಿದೆ ಎಂದು ತಿಳಿಸಿರುವ ಶ್ರೀನಿವಾಸ ಮಾನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರನ್ನು ಅಭಿನಂದಿಸಿದ್ದಾರೆ.ಮನೆ ಕಳುವು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ರಾಣಿಬೆನ್ನೂರು: ಮನೆಗೆ ಹಾಕಿದ ಬೀಗ ಮುರಿದ ಕಳ್ಳರು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಇತ್ತೀಚೆಗೆ ಇಲ್ಲಿನ ಚೋಳಮರಡೇಶ್ವರ ನಗರದಲ್ಲಿ ಜರುಗಿದೆ.ಇಲ್ಲಿನ ನಿವಾಸಿ ಮೃತ್ಯುಂಜಯ ಪಾಟೀಲ ಮನೆಗೆ ನುಗ್ಗಿದ ಕಳ್ಳರು ಮುಂಭಾಗದ ಇಂಟರ್‌ಲಾಕ್‌ನ್ನು ಕಬ್ಬಿಣದ ರಾಡ್‌ನಿಂದ ತೆಗೆದು ಕಬ್ಬಿಣದ ತಿಜೋರಿಯಲ್ಲಿಟ್ಟಿದ್ದ ₹3,96 ಲಕ್ಷ ಮೌಲ್ಯದ 55 ಗ್ರಾಂ ಮಾಂಗಲ್ಯ ಸರ, ₹2,16 ಲಕ್ಷ ಮೌಲ್ಯದ 30 ಗ್ರಾಂ ಒಂದು ಜೊತೆ ಬಂಗಾರದ ಬಳೆ, ₹72 ಸಾವಿರ ಮೌಲ್ಯದ 10 ಗ್ರಾಂ ಒಂದು ಮುತ್ತು ಹವಳವಿರುವ ಬಂಗಾರದ ಚೈನ್, ₹72 ಸಾವಿರ ಮೌಲ್ಯದ 10 ಗ್ರಾಂ ಬಂಗಾರದ ಚೈನ್, ₹28,800 ಮೌಲ್ಯದ 4 ಗ್ರಾಂ ಒಂದು ಜೊತೆ ಬಂಗಾರದ ಕಿವಿ ಓಲೆ, ₹14,400 ಮೌಲ್ಯದ 2 ಗ್ರಾಂ ಬಂಗಾರದ ಉಂಗುರ ಸೇರಿದಂತೆ ಒಟ್ಟು ₹8,28 ಲಕ್ಷ ಮೌಲ್ಯದ 115 ಗ್ರಾಂ ಬಂಗಾರದ ಆಭರಣಗಳನ್ನು ದೋಚಿದ್ದಾರೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.