ಸಾರಾಂಶ
ಸಂಡೂರು: ಕಿರ್ಲೋಸ್ಕರ್ ಕಂಪನಿಯು ಸರ್ಕಾರದ ಪರವಾನಗಿ ಪಡೆಯದೇ ಕಂದಾಯ ಭೂಮಿಯ ಮೂಲಕ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಗಣಿ ಮತ್ತು ಭೂವಿಜ್ಞಾನ, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಜಂಟಿ ಸಮಿತಿಯ ಸದಸ್ಯರು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು.
ಜಂಟಿ ಸಮಿತಿಯಲ್ಲಿ ಇರಬೇಕಾದ ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ) ಅಧಿಕಾರಿಗಳು ಬಾರದಿರುವ ಕಾರಣ ಈ ಪರಿಶೀಲನಾ ಕಾರ್ಯವನ್ನು ಮುಂದೂಡಲಾಯಿತು.ಕಿರ್ಲೋಸ್ಕರ್ ಕಂಪನಿ ಸರ್ಕಾರದ ಪರವಾನಗಿ ಪಡೆಯದೇ ಕಂದಾಯ ಭೂಮಿಯ ಮೂಲಕ ಅಕ್ರಮವಾಗಿ ಅದಿರನ್ನು ಸಾಗಾಟ ಮಾಡುತ್ತಿದೆ. ಈ ಕುರಿತು ಸ್ಥಳ ಪರಿಶೀಲನೆ ಮಾಡಿ, ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜನ ಸಂಗ್ರಾಮ ಪರಿಷತ್ ದೂರು ನೀಡಿತ್ತು. ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಹಾಯಕ ನಿರ್ದೇಶಕರು, ಕೆಐಎಡಿಬಿ ಕಾರ್ಯ ನಿರ್ವಾಹಕ ಅಭಿಯಂತರರು, ತಹಶೀಲ್ದಾರ್ ಹಾಗೂ ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ಜಂಟಿ ಸಮಿತಿ ರಚಿಸಿ, 15 ದಿನಗಳ ಒಳಗೆ ವರದಿ ನೀಡಲು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಗುರುವಾರ ಕೆಐಎಡಿಬಿ ಅಧಿಕಾರಿಗಳನ್ನು ಹೊರತು ಪಡಿಸಿ, ಜಂಟಿ ಸಮಿತಿಯಲ್ಲಿನ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ದ್ವಿತೀಯ, ಭೂವಿಜ್ಞಾನಿ ಚಂದ್ರಶೇಖರ್, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಗುರುಸ್ವಾಮಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು. ಕೆಐಎಡಿಬಿ ಅಧಿಕಾರಿಗಳು ಬಾರದ ಕಾರಣ, ಸ್ಥಳ ಪರಿಶೀಲನಾ ಕಾರ್ಯವನ್ನು ಮುಂದೂಡಲಾಯಿತು.ಈ ಸಂದರ್ಭದಲ್ಲಿ ಜನ ಸಂಗ್ರಾಮ ಪರಿಷತ್ ಮುಖಂಡರಾದ ಟಿ.ಎಂ. ಶಿವಕುಮಾರ್, ಶ್ರೀಶೈಲ ಆಲ್ದಳ್ಳಿ, ರೈತ ಸಂಘದ ಕಲಬುರಗಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಕೆ. ನಾಯ್ಡು, ರೈತರಾದ ಕಾಡಪ್ಪ, ಪರಮೇಶ್ವರಪ್ಪ ಅವರು ಅಧಿಕಾರಿಗಳಿಗೆ ತಮ್ಮ ಅಹವಾಲನ್ನು ಸಲ್ಲಿಸಿ, ರಣಜಿತ್‌ಪುರ ಭಾಗದಲ್ಲಿರುವ ಆರ್‌ಐಪಿಎಲ್ (ರಣಜಿತ್‌ಪುರ ಇನ್‌ಫ್ರಾಸ್ಟ್ರಕ್ಚರ್) ಕಂಪನಿಯವರು ರೈತರು ಹಾಗೂ ಸಾರ್ವಜನಿಕರ ಬಳಕೆಗೆ ಇರುವಂತಹ ಬಂಡಿ ಜಾಡಿನಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಿಕೊಂಡು ಕೇವಲ ಅದಿರು ಸಾಗಾಣಿಕೆ ಮಾಡುವ ಲಾರಿಗಳಿಗೆ ಹೋಗಿ ಬರಲು ಅವಕಾಶ ಮಾಡಿಕೊಡುತ್ತಿದ್ದಾರೆ. ರೈತರಿಗೆ ಜಾನುವಾರುಗಳನ್ನು ಮೇಯಿಸಲು ಬಿಡುತ್ತಿಲ್ಲ. ಗಣಿ ಬಾಧಿತ ಪ್ರದೇಶದಲ್ಲಿ ರೈತರ ಬೇಡಿಕೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ವಿವಿಧ ಸಂಘಟನೆಗಳ ಮುಖಂಡರಾದ ಮೌನೇಶ್, ಜಿ.ಕೆ. ನಾಗರಾಜ, ಈರಣ್ಣ ಮೂಲಿಮನೆ, ಮಂಜುನಾಥ್, ನರಸಿಂಗಾಪುರ ಹಾಗೂ ರಣಜಿತ್‌ಪುರ ಗ್ರಾಮದ ರೈತರು ಉಪಸ್ಥಿತರಿದ್ದರು.ಸ್ಥಳ ಪರಿಶೀಲನೆ ಮಾಡಬೇಕಿದ್ದ ಜಾಗವನ್ನು ಕೆಐಎಡಿಬಿ ಸ್ವಾಧೀನ ಪಡಿಸಿಕೊಂಡಿದೆ. ಈ ದಿನ ಕೆಐಎಡಿಬಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನಾ ಕಾರ್ಯವನ್ನು ಮುಂದೂಡಲಾಗಿದೆ ಎನ್ನುತ್ತಾರೆ ತಹಶೀಲ್ದಾರ್ ಜಿ.ಅನಿಲ್‌ಕುಮಾರ್.