ಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ವಿದ್ಯಾರ್ಥಿ ಸಹೋದರರಾದ ದಿವಿಜ್ ಕಡಿದಾಳ್ ಮತ್ತು ಅದ್ವಿಕ್ ಕಡಿದಾಳ್ ಅವರು ಶಿವಮೊಗ್ಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಂಗಾಂಗ ದಾನದ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ವಿದ್ಯಾರ್ಥಿ ಸಹೋದರರಾದ ದಿವಿಜ್ ಕಡಿದಾಳ್ ಮತ್ತು ಅದ್ವಿಕ್ ಕಡಿದಾಳ್ ಅವರು ಶಿವಮೊಗ್ಗದಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ನಗರದ ರೋಟರಿ ಶಾಲೆ ಶಿವಮೊಗ್ಗ ಪೂರ್ವದಲ್ಲಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿಯೂ ಅಭಿಯಾನವನ್ನು ವಿಸ್ತರಿಸಲು ಎರಡು ಯುವ ರೋಟರಿ ಸಂಘಗಳು ಒಟ್ಟಾಗಿ ಕಾರ್ಯನಿರ್ವಹಿಸಲು ನಿರ್ಧರಿಸಿದವು.

ಸಹೋದರರಾದ ದಿವಿಜ್ ಮತ್ತು ಅದ್ವಿಕ್ ಅವರು ಜಂಟಿಯಾಗಿ ಯೋದ ಬೆಂಗಳೂರು (ಯೂಥ್ ಆರ್ಗಾನ್ ಡೊನೇಷನ್ ಅವೇರ್ನೆಸ್) ಸಂಸ್ಥೆಯ ಮೂಲಕ ಅಂಗಾಂಗ ದಾನ ಜಾಗೃತಿ ಅಭಿಯಾನವನ್ನು ಮುನ್ನಡೆಸುತ್ತಿದ್ದಾರೆ.

ಯೋದ ಬೆಂಗಳೂರು ಯುವ ರೋಟರಿ ಸಂಘದ ಸಂಸ್ಥಾಪಕ ಅಧ್ಯಕ್ಷ ದಿವಿಜ್ ಕಡಿದಾಳ್ ಮಾತನಾಡಿ, ಭಾರತದಲ್ಲಿ ಅಂಗಾಂಗ ದಾನಿಗಳ ಕೊರತೆ, ಅಂಗಾಂಗ ದಾನದ ಮೂಲಕ ಜೀವಗಳನ್ನು ಉಳಿಸುವ ಸಾಧ್ಯತೆ ಹಾಗೂ ಈ ಕುರಿತು ಜನರಲ್ಲಿ ಇರುವ ತಪ್ಪು ಕಲ್ಪನೆಗಳ ಬಗ್ಗೆ ವಿವರಿಸಿದರು. ಅಂಗಾಂಗ ದಾನದ ಕುರಿತ ಸಾಮಾನ್ಯ ಭಯ ಮತ್ತು ಮೂಢ ನಂಬಿಕೆಗಳಿಗೆ ಸ್ಪಷ್ಟನೆ ನೀಡಿದ ಅವರು, ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ಸಮಾಜದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.

ಸಹೋದರರ ಕುಟುಂಬದಲ್ಲಿ ನಡೆದ ಎರಡು ವಿಭಿನ್ನ ಘಟನೆಗಳು ಈ ಅಭಿಯಾನಕ್ಕೆ ಪ್ರೇರಣೆಯಾಗಿವೆ. ಅವರ ಅಜ್ಜಿಯ ನಿಧನದ ಬಳಿಕ ಅವರ ಇಚ್ಛೆಯಂತೆ ನೇತ್ರದಾನ ಮಾಡಲಾಗಿತ್ತು. ಅಲ್ಲದೆ, ಅವರ ದೇಹವನ್ನು ವೈದ್ಯಕೀಯ ಶಿಕ್ಷಣದ ಉದ್ದೇಶಕ್ಕಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಗಿತ್ತು. ಮತ್ತೊಂದೆಡೆ, ಕುಟುಂಬಕ್ಕೆ ಪರಿಚಯವಿದ್ದ ಯುವಕನೊಬ್ಬ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಾಗ, ಸಾಮಾಜಿಕ ಕಳಂಕ ಮತ್ತು ತಪ್ಪು ನಂಬಿಕೆಗಳ ಕಾರಣದಿಂದ ಆತನ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿರಲಿಲ್ಲ.

ಈ ಘಟನೆಗಳಿಂದ ಪ್ರೇರಣೆ ಪಡೆದ ದಿವಿಜ್ ಅವರು ಯೋದ ಬೆಂಗಳೂರು ಸಂಸ್ಥೆಯನ್ನು ಸ್ಥಾಪಿಸಿದರು. ಬಳಿಕ ಸಹೋದರರಿಬ್ಬರೂ ಸೇರಿ ಅಂಗಾಂಗ ದಾನದ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಯೋದ ಬೆಂಗಳೂರು ಸಂಸ್ಥೆಯ ಉಪಾಧ್ಯಕ್ಷ ಅದ್ವಿಕ್ ಕಡಿದಾಳ್ ಅವರು ಸಂಸ್ಥೆಯ ಉದ್ದೇಶ ಹಾಗೂ ಚಟುವಟಿಕೆಗಳನ್ನು ಪರಿಚಯಿಸಿ, ಶಿವಮೊಗ್ಗದಲ್ಲಿಯೂ ಅಂಗಾಂಗ ದಾನ ಜಾಗೃತಿ ಅಭಿಯಾನವನ್ನು ನಿರಂತರವಾಗಿ ಮುಂದುವರಿಸಲು ಸ್ಥಳೀಯ ಯುವ ರೋಟರಿ ಸಂಘದೊಂದಿಗೆ ಸಹಯೋಗದ ಪ್ರಸ್ತಾಪ ಮಾಡಿದರು.

ಕಾರ್ಯಕ್ರಮದ ಕೊನೆಯಲ್ಲಿ ದಿವಿಜ್ ಕಡಿದಾಳ್ ಮತ್ತು ರೋಟರಿ ಶಾಲೆ ಶಿವಮೊಗ್ಗ ಪೂರ್ವದ ಯುವ ರೋಟರಿ ಸಂಘದ ಅಧ್ಯಕ್ಷ ಧನುಷ್ ಅವರು ಎರಡೂ ಸಂಘಗಳು ಯೋದ (YODA) ಅಭಿಯಾನದ ಅಡಿಯಲ್ಲಿ ಸಹೋದರ ಸಂಘಗಳಾಗಿ ಒಟ್ಟಾಗಿ ಕಾರ್ಯನಿರ್ವಹಿಸಲು ಬದ್ಧತೆ ವ್ಯಕ್ತಪಡಿಸಿದರು.

ಈ ಸಹಯೋಗದ ಮೂಲಕ ಶಿವಮೊಗ್ಗದ ವಿದ್ಯಾರ್ಥಿಗಳು ಹಾಗೂ ಕುಟುಂಬಗಳಿಗೆ ಅಂಗಾಂಗ ದಾನದ ಮಹತ್ವವನ್ನು ತಲುಪಿಸುವುದು ಮತ್ತು ಸಮಾಜದಲ್ಲಿ ಈ ಕುರಿತು ಅರಿವು ಹೆಚ್ಚಿಸುವುದು ಅಭಿಯಾನದ ಪ್ರಮುಖ ಗುರಿಯಾಗಿದೆ.

------

ಶಿವಮೊಗ್ಗ ನಗರದ ರೋಟರಿ ಪೂರ್ವ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಂಗಾಂಗ ದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರಿನ ವಿದ್ಯಾರ್ಥಿ ಸಹೋದರರಾದ ದಿವಿಜ್ ಕಡಿದಾಳ್ ಮತ್ತು ಅದ್ವಿಕ್ ಕಡಿದಾಳ್ ಜಾಗೃತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.