ಸಾರಾಂಶ
- ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ನೇತ್ರದಾನ, ದೇಹದಾನ ನೊಂದಣಿ ಶಿಬಿರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುವಿದ್ಯಾದಾನ, ಅನ್ನದಾನವೇ ಶ್ರೇಷ್ಠವಾಗಿತ್ತು ಆದರೆ ಅದಕ್ಕೂ ಮಿಗಿಲಾದ ದಾನ ಅಂಗಾಂಗ ದಾನ. ಇದರಿಂದ ಇತರೆ ಜೀವಗಳು ಬೆಳಕನ್ನು ಕಾಣುತ್ತವೆ ಎಂದು ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.
ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ, ನೇತ್ರದಾನ, ದೇಹದಾನ ನೋಂದಣಿ ಶಿಬಿರ ಹಾಗೂ ಹಿರಿಯ ನಾಗರಿಕರಿಗೆ ಕನ್ನಡಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಅದು ಶಕ್ತಿ. ಅಜ್ಞಾನದ ಕತ್ತಲೆಯಿಂದ ಬೇಳಕಿನೆಡೆಗೆ ಕೊಂಡೊಯ್ಯುವ ಸುಜ್ಞಾನವೇ ಗುರು ಎಂಬ ಸ್ವಾಮಿ ವಿವೇಕಾನಂದರ ನುಡಿಯಂತೆ ಜೀವವು ಯಾರ ಮಾತನ್ನೂ ಕೇಳುವುದಿಲ್ಲ. ಯಾವ ಸಂಧರ್ಭ ದಲ್ಲಿಯೂ ಸಹ ಅದು ನಮ್ಮಿಂದ ದೂರಾಗಬಹುದು. ಆದರೆ ಜೀವನ ಮಾತ್ರ ನಮ್ಮ ಮಾತನ್ನು ಕೇಳಬಲ್ಲದು, ಹಾಗಾಗಿ ಜೀವನವನ್ನು ನಾಲ್ಕು ಜನರಿಗೆ ಉಪಯೋಗವಾಗುವಂತೆ ರೂಪಿಸಿಕೊಂಡರೆ ಸಾರ್ಥಕವಾಗಬಹುದು. ಅಂತೆಯೇ ಸಾವಿನ ನಂತರದ ಅಂಗಾಂಗ ದಾನವೂ ಜೀವನವನ್ನು ಸಾರ್ಥಕತೆಯತ್ತ ಕೊಂಡೊಯ್ಯುತ್ತದೆ ಎಂದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸರ್ಜನ್ ಡಾ. ಮೋಹನ್‌ಕುಮಾರ್ ಮಾತನಾಡಿ, ಬದಲಾದ ಜೀವನ ಶೈಲಿ ಆಹಾರ ಪದ್ಧತಿ ಮತ್ತು ಕೆಲ ರೋಗಗಳ ಅರಿವಿನ ಕೊರತೆಯಿಂದ ಮನುಷ್ಯರು ಸಾಮಾನ್ಯವಾಗಿ ಖಾಯಿಲೆಗೆ ತುತ್ತಾಗುತ್ತಿದ್ದು ಕೆಲ ದುಶ್ಚಟಗಳೂ ಸಹ ಇದಕ್ಕೆ ಮುಖ್ಯ ಕಾರಣ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಅನಿಲ್ ಆನಂದ್ ಅವರು, ರಕ್ತದಾನಕ್ಕೆ ಯುವಕರು ಮುಂದಾಗ ಬೇಕು. ಮನುಷ್ಯನ ವಯಸ್ಸು ರಕ್ತದ ಶುದ್ಧತೆ ಮಾನದಂಡವಾಗಿದ್ದು ವಯೋವೃದ್ದರ ದೇಹದಿಂದ ರಕ್ತ ಪಡೆದರೆ ಹೆಚ್ಚು ಪ್ರಯೋಜನಕ್ಕೆ ಬರುವುದಿಲ್ಲ, ಅಷ್ಟಕ್ಕೂ ವಯೋವೃದ್ಧರ ದೇಹದಲ್ಲಿ ಅದಾಗಲೇ ರಕ್ತ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿ ತಗುಲಿರುತ್ತವೆ. ಹೀಗಾಗಿ ಅವರಲ್ಲಿ ರಕ್ತದ ಉತ್ಪದನಾ ಸಾಮರ್ಥ್ಯ ಕೂಡ ಕಡಿಮೆಯಾಗಿರುತ್ತದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ ಮಾತನಾಡಿ, ರಕ್ತದಾನ ಶಿಬಿರಗಳೆಂದರೆ ಪ್ರಚಾರ ಗಿಟ್ಟಿಸಿ ಕೊಳ್ಳುವಂತಹ ಕಾರ್ಯಕ್ರಮ ಎಂದು ಭಾವಿಸಬೇಡಿ, ಮನುಷ್ಯನ ಆರೋಗ್ಯದ ಎಲ್ಲ ಸಮಸ್ಯೆಗಳಿಗೆ ವೈದ್ಯರಿಂದಲೇ ಪರಿಹಾರ ಸಿಗುತ್ತದೆ ಎನ್ನುವುದು ತಪ್ಪು. ಮೂತ್ರಪಿಂಡ, ರಕ್ತ, ಕಣ್ಣು ಹೃದಯ ಇನ್ನಿತರ ಭಾಗಗಳನ್ನು ಇನ್ನೊಬರ ದೇಹಕ್ಕೆ ವರ್ಗಾವಣೆ ಮಾಡಬಹುದಾಗಿದ್ದು ಅವುಗಳನ್ನು ದಾನರೂಪವಾಗಿ ನೀಡುವುದು ಪುಣ್ಯದ ಕೆಲಸ, ಈ ಕುರಿತು ಸಂಘ ಸಂಸ್ಥೆಗಳ ಸಹಕಾರ ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಅವಶ್ಯವಿದೆ, ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಯಾರೇ ಮುಂದಾದರೂ ಸಹ ಅದಕ್ಕೆ ನಮ್ಮ ಸಹಕಾರ ದೊರಕಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ , ಪೌರಾಯುಕ್ತ ಬಿ.ಸಿ. ಬಸವರಾಜ್, ಕೆಆರ್‌ಎಸ್ ಆಸ್ಪತ್ರೆಯ ಡಾ.ಯೋಗೀಶ್, ಜಿಲ್ಲಾಸ್ಪತ್ರೆ ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಮುರುಳಿಧರ್, ಜಲಜಾಕ್ಷಿ, ಇ ಎನ್ ಟಿ ತಜ್ಞ ಡಾ.ಶಾಂಭವಿ, ನಗರಸಭಾ ಮಾಜಿ ಸದಸ್ಯ ಮಧು, ಕನ್ನಡ ಸೇನೆ ತಾಲೂಕು ಅಧ್ಯಕ್ಷ ಜಯಪ್ರಕಾಶ್, ಕಾಂಗ್ರೆಸ್ ಮುಖಂಡ ರೂಬಿನ್ ಮೋಸಸ್, ಪತ್ರಕರ್ತರಾದ ರಾಜ್‌ಶೇಖರ್, ಅಕ್ಷಯ್ ಕುಮಾರ್, ಎಸ್‌ಟಿಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಭಾರತಿ, ಮಧುಕರ್ ಶೆಟ್ಟಿ ಯುವ ಬಳಗದ ಚೌಡಪ್ಪ ಇದ್ದರು.7 ಕೆಸಿಕೆಎಂ 5
ಚಿಕ್ಕಮಗಳೂರಿನ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ವಯೋವೃದ್ಧರಿಗೆ ಕನ್ನಡಕಗಳನ್ನು ಉಚಿತವಾಗಿ ನೀಡಲಾಯಿತು. ಶಾಸಕ ಎಚ್.ಡಿ. ತಮ್ಮಯ್ಯ, ಅನಿಲ್ ಆನಂದ್, ರಾಜಶೇಖರ್ ಇದ್ದರು.