ಸಾವಯವ ಕೃಷಿಯಿಂದ ಉತ್ತಮ ಆಹಾರ

| Published : Oct 17 2025, 01:01 AM IST

ಸಾರಾಂಶ

ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವ ಸಲುವಾಗಿ 2013ರಲ್ಲಿ ಅಂದಿನ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ನೇತೃತ್ವದ ಭಾರತ ಸರ್ಕಾರವು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತು

ಕೊಪ್ಪಳ: ಎಲ್ಲರಿಗೂ ಉತ್ತಮ ಆಹಾರ ಒದಗಿಸಲು ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಉತ್ತೇಜನ ನೀಡಬೇಕಾಗಿದ್ದು, ಕೃಷಿ ಮತ್ತು ಪಶು ಸಖಿಯರು ಇಲಾಖಾ ಕಾರ್ಯಕ್ರಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಗುರುವಾರ ಕೊಪ್ಪಳ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ 2025-26ನೇ ಸಾಲಿನ ಆತ್ಮ ಯೋಜನೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಇಲಾಖೆ, ಮೀನುಗಾರಿಕೆ ಇಲಾಖೆ,ಕೃಷಿ ತಂತ್ರಜ್ಞರ ಸಂಸ್ಥೆ ಮತ್ತು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಆಹಾರ ದಿನಾಚರಣೆ-2025ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ)ಯ ಸ್ಥಾಪನೆ ದಿನ ವಿಶ್ವ ಆಹಾರ ದಿನಾಚರಣೆಯನ್ನಾಗಿ ಇಂದು ಆಚರಿಸಲಾಗುತ್ತಿದೆ. ಎಲ್ಲ ಜನರಿಗೂ ಸಹ ಒಳ್ಳೆಯ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಉತ್ತಮ ಆಹಾರ ಮತ್ತು ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸಿ ಎಂಬ ಘೋಷವಾಕ್ಯದೊಂದಿಗೆ ಈ ವರ್ಷದ ವಿಶ್ವ ಆಹಾರ ದಿನಾಚರಣೆ ಆಚರಿಸಲಾಗುತ್ತಿದೆ. ಸ್ವಾತಂತ್ರ್ಯ ಬಂದಾಗ ಭಾರತದ ಜನಸಂಖ್ಯೆ ಸುಮಾರು ₹34 ರಿಂದ ₹35 ಕೋಟಿ ಇದ್ದು, ಪ್ರಸ್ತುತ ₹146 ಕೋಟಿಗೆ ತಲುಪಿದೆ. ಪ್ರತಿಯೊಬ್ಬರಿಗೂ ಆಹಾರ ಭದ್ರತೆ ಒದಗಿಸುವ ಸಲುವಾಗಿ 2013ರಲ್ಲಿ ಅಂದಿನ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ನೇತೃತ್ವದ ಭಾರತ ಸರ್ಕಾರವು ಆಹಾರ ಭದ್ರತಾ ಕಾಯ್ದೆ ಜಾರಿಗೆ ತಂದಿತು.ಇದರಿಂದ ಅಂತ್ಯೋದಯ ಅನ್ನ ಯೋಜನೆಯಡಿ 35 ಕೆಜಿ ಅಕ್ಕಿ ಮತ್ತು ಇತರೆ ಧಾನ್ಯಗಳು, ಬಡ ಕುಟುಂಬಗಳಿಗೆ 5 ಕೆಜಿ ಅಕ್ಕಿ ಹಾಗೂ ಇತರೆ ಧಾನ್ಯ ನೀಡುವಂತಹ ಕಾರ್ಯಕ್ರಮ ಪ್ರಾರಂಭವಾಯಿತು ಎಂದರು.

ಪ್ರಸ್ತುತ ಜನರು ಫಾಸ್ಟ್ಫುಡ್ ಸೇವನೆ ಹೆಚ್ಚಾಗಿ ಮಾಡುತ್ತಿದ್ದಾರೆ. ಮಕ್ಕಳು ಸಹ ಚಾಕಲೇಟ್, ಬಿಸ್ಕೇಟ್, ಚಿಪ್ಸ್, ಕುರಕುರೆ ತಿಂದರೆ, ನಗರ ಪ್ರದೇಶಗಳ ಹೆಚ್ಚು ಜನರು ದಿನನಿತ್ಯ ಮ್ಯಾಗಿ, ಬರ್ಗರ್, ಪಿಜ್ಜಾದಂತಹ ಫಾಸ್ಟ್ಫುಡ್ ಬಳಕೆ ಮಾಡುತ್ತಾರೆ. ನಿರಂತರ ಇಂತಹ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಎಲ್ಲರೂ ಪೌಷ್ಟಿಕ ಆಹಾರಗಳ ಬಳಕೆಗೆ ಆದ್ಯತೆ ನೀಡಬೇಕು. ಉತ್ತಮ ಆಹಾರ ಎಂದರೆ ಸಮತೋಲಿತ ಆಹಾರವಾಗಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿಗಳಲ್ಲಿ ಚಿಕ್ಕ ಮಕ್ಕಳಿಗೆ ಹಾಗೂ ಗರ್ಭೀಣಿ ಮತ್ತು ಬಾಣಂತಿಯರಿಗೆ, ಶಾಲಾ ಮಕ್ಕಳಿಗೂ ಸಹ ಪೌಷ್ಟಿಕ ಆಹಾರದ ಜತೆಗೆ ಹಾಲು, ಬಾಳೆಹಣ್ಣು ಮತ್ತು ಮೊಟ್ಟೆ ನೀಡಲಾಗುತ್ತದೆ ಎಂದರು.

ಕೃಷಿಯಲ್ಲಿ ರಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡಿ ಬೆಳೆದ ದವಸ ದಾನ್ಯಗಳು, ತರಕಾರಿಗಳು, ಹಣ್ಣುಗಳ ಸೇವನೆಯಿಂದ ಮನುಷ್ಯನ ದೇಹದ ಮೇಲೆ ಪ್ರತಿಕೂಲ ಪರಿಣಾಮವುಂಟಾಗುತ್ತದೆ. ಇದನ್ನು ನಾವು ತಡೆಗಟ್ಟಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಪರಂಪರಾಗತ ಕೃಷಿ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಹಳ್ಳಿಗಳನ್ನು ಸಾವಯವ ಕೃಷಿ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಜಿಲ್ಲೆಯ ಎಲ್ಲ ರೈತರು ಕೈಜೋಡಿಸಬೇಕು. ಇದರ ಜತೆಗೆ ನೀರಿನ ಸಂರಕ್ಷಣೆ ಹಾಗೂ ಹಾಲು, ಮೊಟ್ಟೆ ಮತ್ತು ಮಾಂಸ ಉತ್ಪಾದನೆ ಸಹ ಸಾವಯವ ಪದ್ಧತಿಯಲ್ಲಿಯೇ ಮಾಡುವ ಅನಿವಾರ್ಯತೆಯಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಗಳ ಮೂಲಕ ರೈತರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಜಂಟಿ ಕೃಷಿ ನಿರ್ದೇಶಕರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಟಿ.ಎಸ್. ರುದ್ರೇಶಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ತಂತ್ರಜ್ಞರ ಸಂಸ್ಥೆಯ ಉಪಾಧ್ಯಕ್ಷ ವಿ.ಕೆ. ಕಮತರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಂಗಾವತಿ ಕೃಷಿ ಮಹಾ ವಿದ್ಯಾಲಯ ಕೀಟಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಬದ್ರಿಪ್ರಸಾದ ಪಿ.ಆರ್. ಹಾಗೂ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯ ಪ್ರಾಣಿ ಆಹಾರ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಣಕಾರ ಪಿ.ಎಸ್. ವಿಶೇಷ ಉಪನ್ಯಾಸ ನೀಡಿದರು.

ಸನ್ಮಾನ:

ಜಿಲ್ಲೆಯ ಪ್ರಗತಿ ಪರ ರೈತರಿಗೆ ಮತ್ತು ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಶು ಇಲಾಖೆ ಉಪ ನಿರ್ದೇಶಕ ಡಾ.ಪಿ.ಎಂ. ಮಲ್ಲಯ್ಯ, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಕುಲಕರ್ಣಿ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ. ರವಿ, ಉಪ ಕೃಷಿ ನಿರ್ದೇಶಕ ಎಲ್. ಸಿದ್ದೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಗತಿಪರ ರೈತರು, ಕೃಷಿ ಹಾಗೂ ಪಶು ಸಖಿಯರು ಮತ್ತಿತರರು ಉಪಸ್ಥಿತರಿದ್ದರು. ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕಿ (ರೈತ ಮಹಿಳೆ) ಶಶಿಕಲಾ ಯು. ಸವಣೂರು ಕಾರ್ಯಕ್ರಮ ನಿರೂಪಿಸಿದರು.