ಸಾವಯವ ಗೊಬ್ಬರ ರಿಯಾಯಿತಿ ದರದಲ್ಲಿ ಮಾರಾಟ: ಸುಜಾತಾ

| Published : Mar 29 2025, 12:35 AM IST

ಸಾರಾಂಶ

ಚಿಕ್ಕಮಗಳೂರು, ನಗರ ಪ್ರದೇಶದಲ್ಲಿ ಸಂಗ್ರಹಿಸುವ ದೈನಂದಿನ ಕಸದ ತ್ಯಾಜ್ಯಗಳನ್ನು ವಿಂಗಡಿಸಿ, ಸಾವಯವ ಗೊಬ್ಬರವನ್ನಾಗಿ ಸಿದ್ಧಪಡಿಸಿ ರಿಯಾಯಿತಿ ದರದಲ್ಲಿ ಕೃಷಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.

ಇಂದಾವರ ಬಳಿ ನಗರಸಭೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಗೊಬ್ಬರ ತಯಾರಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ನಗರ ಪ್ರದೇಶದಲ್ಲಿ ಸಂಗ್ರಹಿಸುವ ದೈನಂದಿನ ಕಸದ ತ್ಯಾಜ್ಯಗಳನ್ನು ವಿಂಗಡಿಸಿ, ಸಾವಯವ ಗೊಬ್ಬರವನ್ನಾಗಿ ಸಿದ್ಧಪಡಿಸಿ ರಿಯಾಯಿತಿ ದರದಲ್ಲಿ ಕೃಷಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.

ತಾಲೂಕಿನ ಇಂದಾವರ ಗ್ರಾಮದ ಬಳಿ ಇರುವ ನಗರಸಭೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಸಿದ್ಧಪಡಿಸಿರುವ ಸಾವಯವ ಗೊಬ್ಬರವನ್ನು ರಿಯಾಯಿತಿ ದರದಲ್ಲಿ ಶುಕ್ರವಾರ ವಿತರಿಸಿ ಮಾತನಾಡಿದ ಅವರು, ಈ ಗೊಬ್ಬರವನ್ನು ರೈತರಿಗೆ, ಬೆಳೆಗಾರರಿಗೆ ಕೆಜಿಗೆ ₹ 3 ದರದಲ್ಲಿ ನೀಡಲಾಗುವುದು ಎಂದರು.

ಟನ್‌ಗಟ್ಟಲೇ ಸಂಗ್ರಹಿಸುವ ಕಸವನ್ನು ವಿಲೇವಾರಿ ಘಟಕದಲ್ಲಿ ಪ್ಲಾಸ್ಟಿಕ್‌ನಿಂದ ಬೇರ್ಪಡಿಸಿ ಟ್ರಾಮರ್ ಯಂತ್ರದ ಸಹಾಯ ದಿಂದ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಂತಿಮ ಹಂತದಲ್ಲಿ ಸಾವಯವ ಗೊಬ್ಬರ ತಯಾರಿಕೆಯಾಗಲಿದೆ. ಪ್ರಸ್ತುತ 350 ಟನ್‌ಗಳಷ್ಟು ಗೊಬ್ಬರ ಹರಾಜು ಮೂಲಕ ಮಾರಾಟ ಮಾಡಲಾಗಿದೆ ಎಂದು ಹೇಳಿದರು.ಪ್ರಸ್ತುತ ರಸ ಗೊಬ್ಬರವು ಮಾರುಕಟ್ಟೆಯಲ್ಲಿ ದುಬಾರಿಯಾಗಿದೆ. ಆದರೆ, ನಗರಸಭೆ ₹3 ಗಳಿಗೆ ಸೀಮಿತಗೊಳಿಸಿದೆ. ಗೊಬ್ಬರದ ಬೇಡಿಕೆ ಹೆಚ್ಚಾದಂತೆ ನಿಗಧಿತ ದರದಲ್ಲಿ ಕೊಡಲಾಗುವುದು ಎಂದರು.

ನಗರಸಭಾ ಪೌರಾಯುಕ್ತ ಬಿ.ಸಿ.ಬಸವರಾಜ್ ಮಾತನಾಡಿ, ಕಸದ ತ್ಯಾಜ್ಯ ಸಂಸ್ಕರಿಸಿ, ಗೊಬ್ಬರ ತಯಾರಿಸಿ ಹರಾಜು ಮುಖಾಂತರ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಸಾರ್ವಜನಿಕ ವಲಯದಲ್ಲಿ ಕಸದಿಂದ ಗೊಬ್ಬರ ತಯಾರಿಸುವ ಪ್ರಕ್ರಿಯೆ ಯನ್ನು ಮನವರಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲೇ ಬೀಸಾಡುವ ಬದಲು ಕಸದ ವಾಹನಗಳಿಗೆ ಹಾಕಬೇಕು. ಇದರಿಂದ ಗೊಬ್ಬರ ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ನೀಡಲಾಗುವುದು. ಈ ಹರಾಜು ಪ್ರಕ್ರಿಯೆಯಲ್ಲಿ ಬಿಡ್ಡುದಾರರು ಭಾಗವಹಿಸಿ ಕೆಜಿಗೆ 3 ರೂ.ಗಳಂತೆ ಖರೀದಿಸಿದ್ದಾರೆ ಎಂದರು.ಪ್ರತಿ ಮೂರು ತಿಂಗಳಿಗೊಮ್ಮೆ ಈ ರೀತಿ ಕಸ ವಿಂಗಡಿಸುವ ಮೂಲಕ ಗೊಬ್ಬರ ತಯಾರಿಸಿ ಮಾರಾಟಕ್ಕೆ ಮುಂದಾಗುತ್ತೇವೆ. ಈ ರೀತಿ ಉತ್ತಮ ಕೆಲಸಕ್ಕೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕವಾಗಿದೆ. ಹೀಗಾಗಿ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸಿ ನೀಡಿದರೆ ಗೊಬ್ಬರ ತಯಾರಿಸಲು ಇನ್ನಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜಸ್ವಿನಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಕೆ.ಎಸ್.ಈಶ್ವರಪ್ಪ, ವೆಂಕಟೇಶ್ ಹಾಗೂ ನಗರಸಭೆ ಸಿಬ್ಬಂದಿ ಇದ್ದರು.

28 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದ ಬಳಿ ಇರುವ ನಗರಸಭೆ ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಸಿದ್ಧಪಡಿಸಿರುವ ಸಾವಯವ ಗೊಬ್ಬರದ ರಿಯಾಯಿತಿ ಮಾರಾಟಕ್ಕೆ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಶುಕ್ರವಾರ ಚಾಲನೆ ನೀಡಿದರು. ಪೌರಾಯುಕ್ತ ಬಿ.ಸಿ. ಬಸವರಾಜ್‌ ಇದ್ದರು.