ಸಮಾಜ ಶಕ್ತಿ ಗೊತ್ತಾಗಲು ಸಂಘಟನೆ ಅಗತ್ಯ: ವಿಜಯ ನಾಡಜೋಶಿ

| Published : Oct 20 2024, 01:59 AM IST

ಸಮಾಜ ಶಕ್ತಿ ಗೊತ್ತಾಗಲು ಸಂಘಟನೆ ಅಗತ್ಯ: ವಿಜಯ ನಾಡಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಸಂಘಟನೆ ಪದಾಧಿಕಾರಿಗಳು ಭಾಗವಹಿಸಿ, ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಕೊಪ್ಪಳ: ಸಮಾಜದ ಶಕ್ತಿ ಗೊತ್ತಾಗಲು ಸಂಘಟನೆ ಅಗತ್ಯವಾಗಿದ್ದು, ಎಲ್ಲರೂ ಒಂದೇ ವೇದಿಕೆಯಲ್ಲಿ ಕೂಡಿದರೆ ಅಭಿವೃದ್ಧಿಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈಗ ರಾಜ್ಯದಾದ್ಯಂತ ಭರಪೂರ ಪ್ರಯತ್ನ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ ಹೇಳಿದರು.

ನಗರದಲ್ಲಿ ನಡೆದ ಬ್ರಾಹ್ಮಣ ಮಹಾಸಭಾದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಹಾಸಭಾ ಆರಂಭವಾಗಿ ಈಗ 50 ವರ್ಷಗಳಾಗಿದ್ದು, 2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಜರುಗಲಿದೆ. ಬ್ರಾಹ್ಮಣ ಮಹಾಸಭಾದ ಸದಸ್ಯರಾದರೆ ಅವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ವೈದ್ಯಕೀಯ ಸೌಲಭ್ಯದಲ್ಲಿ ರಿಯಾಯಿತಿ, ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ವಸತಿ ಸೌಲಭ್ಯ ಹೀಗೆ ಅನೇಕ ಸವಲತ್ತುಗಳು ದೊರೆಯುತ್ತವೆ. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಘಟನಾ ಶಕ್ತಿ ತೋರಿಸಬೇಕು ಎಂದರು.

ಮಹಾಸಭಾದ ಪ್ರಮುಖ ವಸಂತ ಪೂಜಾರ ಮಾತನಾಡಿ, ಸ್ವಂತಶಕ್ತಿಯ ಮೇಲೆ ಸಮಾಜದಲ್ಲಿ ಮುಂದೆ ಬಂದಿದ್ದೇವೆ. ಎರಡ್ಮೂರು ವರ್ಷಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಬ್ರಾಹ್ಮಣ ಸಮಾಜ ಈಗ ಉತ್ತಮವಾಗಿ ಸಂಘಟನೆಯಾಗುತ್ತಿದೆ ಎಂದರು.

ಮಹಾಸಭಾದ ರಾಜ್ಯ ಉಪಾಧ್ಯಕ್ಷ ಆನಂದತೀರ್ಥ ಫಡ್ನವೀಸ್ ಮಾತನಾಡಿ, ನಿರಂತರ ಚಟುವಟಿಕೆಯಿಂದಾಗಿ ಸಮಾಜ ಬಲಿಷ್ಠವಾಗುತ್ತದೆ. ಈಗ ಬ್ರಾಹ್ಮಣ ಮಾತ್ರವಲ್ಲ, ಹಿಂದೂ ಸಮಾಜವೇ ಸಂಕಷ್ಟದ ಸ್ಥಿತಿಯಲ್ಲಿದೆ. ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿ ಅವರು ಸಂಘಟನೆ ಬಲಪಡಿಸಲು ಶ್ರಮಿಸುತ್ತಿದ್ದಾರೆ. ನಮ್ಮ ಸಮಾಜದ ಜನ ರಾಜಕೀಯವಾಗಿ ಬಲಿಷ್ಠರಾಗಬೇಕು. ಪ್ರತಿ ಜಿಲ್ಲೆಯಲ್ಲಿ ರಾಜಕೀಯ ನಾಯಕ ಬೆಳೆಯಬೇಕು ಎಂದು ಹೇಳಿದರು.

ಸುವರ್ಣ ಮಹೋತ್ಸವ ಅಂಗವಾಗಿ 24 ಕೋಟಿ ಗಾಯತ್ರಿ ಜಪಯಜ್ಞದ ಸಂಕಲ್ಪ ಮಾಡಲಾಗಿದ್ದು, ಇದಕ್ಕೆ ಜಿಲ್ಲೆಯಿಂದಲೂ ಸಹಕಾರ ನೀಡಬೇಕು. ಆರ್ಥಿಕ ನೆರವಿಗೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಮಹಾಸಭಾದ ಜಿಲ್ಲಾ ಸಂಚಾಲಕ ಎಚ್.ಬಿ. ದೇಶಪಾಂಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಲತಾ ಮುಧೋಳ, ಯುವ ಘಟಕದ ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಎನ್‌. ಜೋಶಿ, ಜಿಲ್ಲಾ ಸಹ ಸಂಚಾಲಕಿ ಮಧುರಾ ಕರ್ಣಂ, ಮುಖಂಡರಾದ ಶ್ರೀಕಾಂತ ಪೂಜಾರ ಇಟಗಿ, ರಾಘವೇಂದ್ರ ನರಗುಂದ, ವೇಣುಗೋಪಾಲ್‌ ಜಹಗೀರದಾರ್‌, ರಮೇಶ ಜಹಗೀರದಾರ್‌ ಪಾಲ್ಗೊಂಡಿದ್ದರು.