ಸಾರಾಂಶ
, 20 ಬೇರೆ ಬೇರೆ ವಲಯದಲ್ಲಿ ಸಂಘಟನೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತದೆ. 5700ಕ್ಕೂ ಮೇಲ್ಪಟ್ಟು ಸಂಘಟನೆ ಇದರ ಅಡಿಯಲ್ಲಿ ಕೆಲಸ ಮಾಡುತ್ತದೆ.
ಹೊನ್ನಾವರ: ಸಂಘಟನೆ ಕಾರ್ಮಿಕರ ಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕಾರ್ಮಿಕರಿಗೆ ಇಲಾಖೆಯಿಂದ ಸಿಗಬೇಕಾದ ಹಲವು ಸೌಲಭ್ಯಗಳ ಸಿಗದಿರುವ ಬಗ್ಗೆ ಹೈಕೋರ್ಟ್‌ನಲ್ಲಿ ದಾವೆ ಹೂಡಿ ವಾದ ಮಂಡಿಸಿದ್ದೇವೆ ಎಂದು ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ತಿಳಿಸಿದರು.
ಪಟ್ಟಣದ ಬ್ಯಾಂಕ್ ರಸ್ತೆಯ ಜಿ.ಟಿ. ಹೆಬ್ಬಾರ್ ಕಾಂಪೌಂಡ್‌ನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ತಾಲೂಕು ಘಟಕದಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಲಾಖಾ ಅಧಿಕಾರಿಗಳು ಪರಿಹಾರ ಸಿಗಲು ಸಾಧ್ಯವೇ ಇಲ್ಲ ಎನ್ನುವಂಥ ಪ್ರಕರಣದಲ್ಲಿಯೂ ಗೆಲುವು ಕಂಡು ಅರ್ಹ ಕಾರ್ಮಿಕರಿಗೆ ಸಿಗಬೇಕಾದ ಪರಿಹಾರ ಒದಗಿಸಿಕೊಟ್ಟಿದ್ದೇವೆ. ಕಾರ್ಮಿಕ ನಿಯಮಾವಳಿ ಅಡಿಯಲ್ಲಿ ಅರ್ಜಿ ಸಲ್ಲಿಸಿಯೂ ಹಣ ಜಮಾ ಆಗದಿದ್ದಲ್ಲಿ ಕಾನೂನಾತ್ಮಕವಾಗಿ ಪ್ರಕರಣ ದಾಖಲಿಸಿದರೆ ಖಂಡಿತ ಪರಿಹಾರ ಪಡೆಯಲು ಸಾಧ್ಯ. ನಾವು ನಿಮ್ಮೊಂದಿಗೆ ಸದಾ ಸಹಾಯಕ್ಕಿರುತ್ತೇವೆ ಎಂದು ಧೈರ್ಯ ತುಂಬಿದರು.ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ರಾಜ್ಯಾಧ್ಯಕ್ಷ ಚಿಂತಾಮಣಿ ಕೂಡಳ್ಳಿ ಮಾತನಾಡಿ, 20 ಬೇರೆ ಬೇರೆ ವಲಯದಲ್ಲಿ ಸಂಘಟನೆ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುತ್ತದೆ. 5700ಕ್ಕೂ ಮೇಲ್ಪಟ್ಟು ಸಂಘಟನೆ ಇದರ ಅಡಿಯಲ್ಲಿ ಕೆಲಸ ಮಾಡುತ್ತದೆ. ಅದರಲ್ಲಿ ಭಾರತೀಯ ಮಜ್ದೂರ್ ಸಂಘ ಕಳೆದ 30 ವರ್ಷಗಳಿಂದ ನಂಬರ್ ಒನ್ ಸ್ಥಾನದಲ್ಲಿದೆ. ಇದೀಗ ದೊಡ್ಡ ಆಲದ ಮರದಂತೆ ಸಂಘಟನೆ ಬೆಳೆದಿದೆ. ದೇಶಾದ್ಯಂತ 5 ಕೋಟಿಗೂ ಮೇಲ್ಪಟ್ಟು ಸದಸ್ಯರಿದ್ದಾರೆ. ಇಂತಹ ಸಂಘಟನೆಯಲ್ಲಿ ಕೆಲಸ ಮಾಡುವುದೇ ಪುಣ್ಯ ಎಂದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ನೋಂದಾಯಿತ ಕಾರ್ಮಿಕರಿಗೆ ಇನ್ನು ಹಲವಾರು ಗೊಂದಲಗಳಿದೆ. ಇ- ಕಾರ್ಡ್ ಮಾಡುವುದು ಕಡ್ಡಾಯವಾಗಿದೆ. ಪೋರ್ಜರಿ ಪ್ರಕರಣ, ಅನರ್ಹರು ಕಾರ್ಡ್ ಪಡೆಯುತ್ತಿರುವ ಹಿನ್ನೆಲೆ ಕಾರ್ಮಿಕ ಇಲಾಖೆಯ ನಿಯಮಾವಳಿಯಲ್ಲಿ ಒಂದಿಲ್ಲೊಂದು ಬದಲಾವಣೆ ಆಗುತ್ತಿದೆ. ಏತನ್ಮಧ್ಯೆ ಕಾರ್ಮಿಕರ ಸೌಲಭ್ಯ ಪಡೆಯುವ ಕೆಲಸವು ಆಗುತ್ತಿಲ್ಲ. ಸಂಘಟನೆಗಳ ಮಾತನ್ನು ಸಹ ಕಾರ್ಮಿಕ ಮಂಡಳಿ, ಸರ್ಕಾರ ಆಲಿಸುತ್ತಿಲ್ಲ. ಸಮಾವೇಶ, ಹೋರಾಟ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇವೆ ಎಂದರು.ಬಿಎಂಎಸ್ ಹೊನ್ನಾವರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿದ ದಿವ್ಯಾ ನಾಯ್ಕ, ಸವಿತಾ ಗೌಡ ಅವರನ್ನು ತಾಲೂಕು ಸಂಘಟನೆ ವತಿಯಿಂದ ಗೌರವಿಸಲಾಯಿತು.
ಸಂಘಟನೆಯ ತಾಲೂಕಾಧ್ಯಕ್ಷ ಉಮೇಶ ನಾಯ್ಕ, ಕರಿಮುಲ್ಲಾ ಕಂಬಳಿ, ಮಾರುತಿ ಹಂಪಿಹೊಳಿ, ನಾಗೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ನೋಂದಾಯಿತ ಕಟ್ಟಡ ಕಾರ್ಮಿಕರು ಪಾಲ್ಗೊಂಡಿದ್ದರು.