ಸಾರಾಂಶ
ಕೊಪ್ಪಳ:
ಪ್ರಮುಖ ವ್ಯಕ್ತಿಗಳು ಸೇರಿಕೊಂಡು ಸಂಘ ರಚಿಸುವುದು ಸುಲಭದ ಕೆಲಸ. ಆದರೆ, ಅದರ ಸಂಘಟನೆಯನ್ನು ಸರಿಯಾದ ರೀತಿಯಲ್ಲಿ ಮುನ್ನಡಿಸುವುದು ಮುಖ್ಯವಾದದು ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.ಅವರು ಮಂಗಳವಾರ ನಗರದ ತಾಲೂಕು ಪಂಚಾಯಿತಿಯಲ್ಲಿ ಸರ್ಕಾರಿ ಮಹಿಳೆಯರ ನೌಕರರ ಸಂಘದ ಜಿಲ್ಲಾ ಘಟಕದ ಉದ್ಘಾಟನೆ, ಪದಗ್ರಹಣ ಮತ್ತು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ತಮ್ಮ ಹಕ್ಕು ಹಾಗೂ ಬೇಡಿಕೆಗಳ ಈಡೇರಿಕೆಗಾಗಿ ಆಯ್ದ ವ್ಯಕ್ತಿಗಳು ಸೇರಿಕೊಂಡು ಸಂಘ ರಚಿಸುವುದು ಸರಳ ವಿಧಾನವಾಗಿದೆ. ಕೇವಲ ಸಂಘ ರಚಿಸಿದರೆ ಸಾಲದು, ಆ ಸಂಘ ತನ್ನ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು ಹಾಗೂ ಅವರ ಬೇಕು-ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಈಡೇರಿಸಬೇಕು. ಆಗ ಮಾತ್ರ ಸಂಘ ಸಂಘಟನೆಯಾಗಿ ಶಾಶ್ವತವಾಗಿ ಉಳಿಯುತ್ತವೆ ಎಂದರು.
ಪ್ರಸ್ತುತ ದಿನಗಳಲ್ಲಿ ಅನೇಕ ರೀತಿಯ ಸಂಘಟನೆಗಳು ಉದಯವಾಗುತ್ತಿದ್ದು, ಅವು ಸದಸ್ಯರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಲಿ. ಮಹಿಳೆಯರ ಸಂಘ ಕೂಡಾ ತನ್ನ ಸದಸ್ಯರ ಬೇಡಿಕೆಗಳಿಗೆ ಹಾಗೂ ಅವರ ಸಮಸ್ಯೆಗಳಿಗೆ ಧ್ವನಿಯಾಗಲಿ ಎಂದು ಹೇಳಿದರು.ನಗರಸಭೆ ಅಧ್ಯಕ್ಷ ಅಮ್ಜದ ಪಟೇಲ ಮಾತನಾಡಿ, ಸರ್ಕಾರಿ ನೌಕರರು ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಸರ್ಕಾರ ಅವರ ಒತ್ತಡ ಕಡಿಮೆ ಮಾಡಲು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವ ಕೆಲಸ ಮಾಡಬೇಕಿದೆ ಎಂದರು.
ತಹಸೀಲ್ದಾರ್ ವಿಠ್ಠಲ ಚೌಗಲೆ ಮಾತನಾಡಿ, ಯಾವುದೇ ಸೌಲಭ್ಯ ಪಡೆಯಬೇಕಾದರೆ ಒಬ್ಬ ವ್ಯಕ್ತಿಯಿಂದ ಸಾಧ್ಯವಾಗುವುದಿಲ್ಲ. ಅದೇ ಸಂಘ ಹಾಗೂ ಸಂಘಟನೆಯ ಮೂಲಕ ಬೇಗ ಪಡೆಯಬಹುದಾಗಿದೆ. ಸರ್ಕಾರಿ ಸೇವೆಯಲ್ಲಿ ಇರುವ ಮಹಿಳೆಯರು ವಿಶಾಲ ಮನೋಭಾವನೆ ಬೆಳೆಸಿಕೊಳ್ಳುವ ಜತೆಗೆ ಇತರ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.ಸರ್ಕಾರಿ ಮಹಿಳೆಯರ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೈಲಜಾ ಸಿ.ವಿ. ಮಾತನಾಡಿ, ಸರ್ಕಾರಿ ಸೇವೆ ಸಲ್ಲಿಸುತ್ತಿರುವ ಅನೇಕ ಮಹಿಳೆಯರು ವಿವಿಧ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದು, ಅವುಗಳ ಪರಿಹಾರಕ್ಕಾಗಿ ಸಂಘಟನೆ ಕಟ್ಟಲಾಗಿದೆ. ನೊಂದ ಸರ್ಕಾರಿ ಮಹಿಳಾ ನೌಕರರಿಗೆ ನ್ಯಾಯ ಒದಗಿಸಿ ಕೊಡುವ ಕೆಲಸ ಮಾಡಲಾಗಿದೆ. ಎಲ್ಲ ಜಿಲ್ಲೆಯಲ್ಲಿ ಸಂಘಟನೆಯಾದ ಬಳಿಕ ರಾಜ್ಯ ಮಟ್ಟದ ಸಮ್ಮೇಳನ ಮಾಡುವ ಚಿಂತನೆ ಇದೆ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ನಪೂರ್ಣಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧ್ಯಕ್ಷೆ ಮಹಾಲಕ್ಷ್ಮೀ ಪಿ.ಆರ್. ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಸಬಲೀಕರಣದ ಕುರಿತು ಸಾಹಿತಿ ಅರುಣಾ ನರೇಂದ್ರ ಉಪನ್ಯಾಸ ನೀಡಿದರು.ಸರ್ಕಾರಿ ಮಹಿಳೆಯರ ನೌಕರರ ಸಂಘದ ರಾಜ್ಯಾಧ್ಯಕ್ಷೆ ರಮಾ ಆರ್., ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ ಉಪಸ್ಥಿತರಿದ್ದರು.
ಶಿಕ್ಷಕಿ ಸುಜಾತಾ ಕುರಿ ಕಾರ್ಯಕ್ರಮ ನಿರೂಪಿಸಿದರು. ಶಂಕ್ರಮ್ಮ ಸ್ವಾಗತಿಸಿದರು. ಶಾಂತಾ ವಂದಿಸಿದರು.