ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಮುದಾಯಗಳು ಸದೃಢವಾಗಲು ಸಂಘಟನೆಯು ಅತ್ಯಂತ ಅವಶ್ಯಕ. ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಸಂಘಟನೆಯು ಮಹತ್ತರ ಪಾತ್ರ ವಹಿಸುತ್ತದೆ ಎಂದು ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಹೇಳಿದರು.ನಗರದ ಸ್ಕೌಟ್ ಭವನದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ಸರ್ವ ಸದಸ್ಯರ ಮಹಾಸಭೆ, ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧಕರು ಸಮಾಜದ ಆಸ್ತಿ. ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಆಗಬೇಕು. ಹಿರಿಯ ನಾಗರಿಕರ ಸೇವೆ ಮಾಡುವುದು ದೇವರ ಸೇವೆಗೆ ಸಮಾನ. ಜಿಲ್ಲಾ ಗಾಣಿಗ ಸಮಾಜವು ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.ಸಂಸದ ಬಿ.ವೈ. ರಾಘವೇಂದ್ರ ಅವರು 20 ವಿದ್ಯಾರ್ಥಿಗಳಿಗೆ ತಾಯಿಯ ಹೆಸರಿನಲ್ಲಿ ₹20 ಸಾವಿರ ನಗದು ಬಹುಮಾನ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ, ಗಾಣಿಗ ಸಮಾಜದ ಮುಖಂಡ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿ, ನಮ್ಮ ಸಮಾಜ ತುಂಬಾ ಚಿಕ್ಕ ಸಮಾಜ ಆಗಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳು ಸಾಧನೆಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಮಾಜಕ್ಕೆ ಅವಶ್ಯವಿರುವ ಕಟ್ಟಡ ನಿರ್ಮಾಣಕ್ಕೆ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.ಭದ್ರಾವತಿ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ. ಮೋಹನ್ ಮಾತನಾಡಿ, ರಾಜಕೀಯವಾಗಿ ಉತ್ತಮವಾಗಿ ಬೆಳೆಯಲು ಗಾಣಿಗ ಸಮಾಜ ಬೆನ್ನು ತಟ್ಟಿ ಆಶೀರ್ವದಿಸಿದೆ. ನಮ್ಮ ಗಳಿಕೆಯಲ್ಲಿ ಸಮಾಜಸೇವೆಗೆ ಸ್ವಲ್ಪ ಹಣ ವಿನಿಯೋಗಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಸಂಘಕ್ಕೆ ಅವಶ್ಯವಿರುವ ಕಟ್ಟಡ ನಿರ್ಮಾಣವನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.ಉಪಾಧ್ಯಕ್ಷ ಎಸ್.ಎಸ್. ಸತೀಶ್, ಎನ್. ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎಂ.ಆರ್. ಕಿರಣ್‌ಕುಮಾರ್ , ರವಿ.ಎಸ್ , ಇಂದೂಧರ, ಗುರುರಾಜ್, ಆನಂದಕುಮಾರ್, ವಾಗೀಶ್ ಕೋಟಿ, ಸಿದ್ದಲಿಂಗಪ್ಪ, ಜಯಂತ್, ಮಲ್ಲಿಕಾರ್ಜುನ ಕಾನೂರು, ರವೀಶ್, ಎನ್.ಜಿ. ಲೋಕೇಶ್, ಆಡಳಿತ ಮಂಡಳಿ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು.