ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಲು ಇಂತಹ ಸಂಘಟನೆಗಳು ಅವಶ್ಯಕವಾಗಿವೆ. ಈ ರೀತಿಯ ಸಮಾವೇಶಗಳು ಹೆಚ್ಚೆಚ್ಚು ನಡೆಯುವ ಮೂಲಕ ಯುವಕರಲ್ಲಿ ವ್ಯಾಪಾರ, ಉದ್ಯಮದ ಜ್ಞಾನ ಬೆಳೆಸುವ ಅವಶ್ಯಕತೆಯಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಹೇಳಿದರು.ಭಾನುವಾರ ಸಂಜೆ ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಅಂತಾರಾಷ್ಟ್ರೀಯ ಲಿಂಗಾಯತ ಯುವ ವೇದಿಕೆ (ಐಎಲ್‌ವೈಎಫ್) ವತಿಯಿಂದ ನಡೆದ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್ ಕ್ಲೇವ್ 2024ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವೀರಶೈವ ಲಿಂಗಾಯತವಲ್ಲದೇ ಎಲ್ಲ ಸಮಾಜವನ್ನು ಒಗ್ಗೂಡಿಸಿಕೊಂಡು ಬೆಳೆಯಲು ಇಂತಹ ಸಮಾವೇಶ ಅವಶ್ಯಕವಾಗಿದೆ. ಹಿಂದೆ ಭೂಮಿ ಇದ್ದವರು ಮಾತ್ರ ಶ್ರೀಮಂತರು ಎನ್ನುವ ಕಾಲವಿತ್ತು. ಆದರೆ, ಈಗ ಜ್ಞಾನ ಹೊಂದಿದ ವ್ಯಕ್ತಿ ನಿಜವಾದ ಶ್ರೀಮಂತನಾಗುತ್ತಿದ್ದಾನೆ. ಈ ರೀತಿ ಐಎಲ್‌ವೈಎಫ್ ಮೂಲಕ ಅತೀ ಹೆಚ್ಚೆಚ್ಚು ಕಾರ್ಯಕ್ರಮ ನಡೆಯುವಂತಾಗಲಿ. ವೀರಶೈವ ಲಿಂಗಾಯತ ಸಮಾಜದವರು ಪರಸ್ಪರ ನಮ್ಮ ವ್ಯಾಪಾರ ಉದ್ಯಮ ಬೆಳೆಸುವ ಜತೆಗೆ ಸಮಾಜಕದ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಬೇಕಿದೆ. ನಿರ್ದಿಷ್ಟ ಗುರಿ, ನಿರಂತರ ಪರಿಶ್ರಮ ಇದ್ದಲ್ಲಿ ಎಲ್ಲ ಕ್ಷೇತ್ರದಲ್ಲೂ ಯಶಸ್ಸು ಗಳಿಸಲು ಸಾಧ್ಯ. ಈ ಸೂತ್ರದ ಅಡಿ ನಾವೆಲ್ಲರೂ ಮುಂದೆ ಸಾಗೋಣ ಎಂದು ಸಲಹೆ ನೀಡಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 11 ವರ್ಷಗಳ ಹಿಂದೆ ಈ ಸಂಘಟನೆ ಸ್ಥಾಪಿಸಿ, ಪ್ರತಿ ವರ್ಷ ಉತ್ತಮ ಸಮಾವೇಶ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಇಡೀ ವೀರಶೈವ ಸಮಾಜವನ್ನು ಒಗ್ಗಟ್ಟಿನ ಮೂಲಕ ಬೆಳೆಸಿದಾಗ ಮಾತ್ರ ಸಾಧನೆ, ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ಈ ಸಂಘ ಮಾದರಿಯಾಗಿದೆ. ಸಮಾಜದವರೇ ಆದ ವಿಜಯ ಸಂಕೇಶ್ವರ, ಶಾಮನೂರು ಶಿವಶಂಕ್ರಪ್ಪ, ನಿರಾಣಿ ಸೇರಿದಂತೆ ಅನೇಕ ಗಣ್ಯರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಹುಬ್ಬಳ್ಳಿ ಭಾಗದಲ್ಲಿ ವ್ಯಾಪಾರ ಉದ್ಯಮದ ಬೆಳವಣಿಗೆಗೆ ಮುಂದಾದಲ್ಲಿ ನಾನು ಸಹ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಬೇಕಾದ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದರು.ಕಾನ್‌ಕ್ಲೇವ್‌ನ ಮುಖ್ಯ ಸಂಚಾಲಕ ಸಂತೋಷ ಕೆಂಚಂಬಾ ಮಾತನಾಡಿ, ಸ್ವಾಭಿಮಾನದ ಬದುಕನ್ನು ಕಟ್ಟಲು ದಾರಿದೀಪವಾದ ವಚನ ಅದು ಕಾಯಕವೇ ಕೈಲಾಸ ಆಗಿದೆ. ಯಾವಾಗ ನಾವು ಪರಿಪೂರ್ಣವಾಗಿ ಕಾಯಕದಲ್ಲಿ ತೊಡಗಿಕೊಳ್ಳುತ್ತೇವೆಯೋ ಆಗ ಕೈಲಾಸ ಕಾಣಬಹುದಾಗಿದೆ ಎಂದರು.
ಅಶೋಕ ಐರನ್‌ನ ಸಂಸ್ಥಾಪಕ ಜಯಂತ ಹುಂಬರವಾಡಿ ಮಾತನಾಡಿ, ವೀರಶೈವ ಸಮಾಜವನ್ನು ಮುನ್ನೆಲೆಗೆ ತಂದು ಸಾಧನೆಯನ್ನು ಪ್ರದರ್ಶಿಸುವ ಸಮಯ ಈಗ ಬಂದಿದೆ. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದರು.ವಿಪ ಸದಸ್ಯ ನವೀನ್ ಕೊಟಗಿ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಸೇರಿದಂತೆ ಹಲವರು ಮಾತನಾಡಿದರು. ಈ ವೇಳೆ ಬೆಳಗಾವಿ ಪೊಲೀಸ್ ಕಮಿಷನರ್ ಸಿದ್ರಾಮಪ್ಪ, ವಿಆರ್‌ಎಲ್ ಸಂಸ್ಥೆಯ ಶಿವ ಸಂಕೇಶ್ವರ, ಡಾ. ಶರಣಪ್ಪ ಕೊಟಗಿ, ನವೀನ್ ಕೊಟಗಿ, ರವಿರಾಜ್ ಕಮ್ಮಾರ್, ರಮೇಶ ಪಾಟೀಲ, ಚನ್ನು ಹೊಸಮನಿ, ಮೋಹನ ಲಿಂಬಿಕಾಯಿ ಸೇರಿದಂತೆ ಹಲವರಿದ್ದರು.