ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗರಾಜ್ಯದಲ್ಲಿ ಪಿಡಿಒ ವೃತ್ತಿ ಬದುಕು ಸವಾಲುಗಳ ನಡುವೆ ನಡೆಯುತ್ತಿದೆ. ಪಿಡಿಒ ಅಧಿಕಾರಿಗಳಲ್ಲಿ ಸಂಘಟನೆಯ ಶಕ್ತಿ ಕುಂದುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಇಲ್ಲಿನ ಕುವೆಂಪು ರಂಗಮಂದಿರಲ್ಲಿ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘ ಸದಸ್ಯರಲ್ಲಿ ಗೊಂದಲಗಳಿದ್ದರೆ ಸಾರ್ವಜನಿಕವಾಗಿ ಬಹಿರಂಗಗೊಳಿಸದೆ ಕೂತು ಬಗೆಹರಿಸಿಕೊಳ್ಳಬೇಕು ಎಂದರು. ಹಳೆಯ ಪಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸುವ ಬಗ್ಗೆ ಪಿಡಿಒ ಅಧಿಕಾರಿಗಳಲ್ಲಿ ಕಳಕಳಿ ಕಡಿಮೆ ಇದೆ. ಒತ್ತಡದ ವೃತ್ತಿ ಬದುಕಿನ ನಡುವೆ ಇದನ್ನು ಮರೆಯಕೂಡದು. ಹಿಂದೆಲ್ಲಾ ಪಿಡಿಒ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪ ನಡೆಸಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಇದರಿಂದ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಪಿಡಿಒ ಅಧಿಕಾರಿ ಗಳು ಮುಂದಾಗುತ್ತಿದ್ದರು. ಆದರೆ, ಪ್ರಸ್ತುತ ಇದು ಬದಲಾಗಿದೆ. ಪಿಡಿಒ ಅಧಿಕಾರಿಗಳು ಆತ್ಮಸ್ತೈರ್ಯ ಹೆಚ್ಚಿಸಿಕೊಂಡಿದ್ದಾರೆ ಎಂದರು. ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಳ ಕ್ಷೇಮಾಭಿವೃದ್ಧಿ ರಾಜ್ಯ ಅಧ್ಯಕ್ಷ ರಾಜು ವಾರದ ಮಾತನಾಡಿ, ಸವಾಲುಗಳನ್ನು ಎದುರಿಸಲು ಸಂಘಟನೆಯೊಂದಿಗೆ ಕೈ ಜೋಡಿಸಬೇಕು. ಇದರಿಂದ ಸಿಗಬೇಕಾದ ಎಲ್ಲಾ ಸೌಕರ್ಯಗಳನ್ನು ಪಡೆದುಕೊಳ್ಳಬಹುದು ಎಂದರು.ರಾಜ್ಯ ಸಂಘ ಉಪಾಧ್ಯಕ್ಷ ಖುಬಾಸಿಂಗ್ ಜಾದವ್ ಮಾತನಾಡಿ, ರಾಜ್ಯದಲ್ಲಿ ಸಂಘ ಬಲಿಷ್ಠವಾಗಿ ರೂಪುಗೊಂಡು ಕಾರ್ಯ ನಿರ್ವಹಿಸುತ್ತಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಮಸ್ಯೆ ಆಲಿಸಲು ಸಂಘದ ಸಹಾಯವಾಣಿ ಜಾರಿಗೆ ತರಲಾಗಿದೆ. ಇದರಿಂದ, ನೆರೆಗಾ, ವಸತಿ ಯೋಜನೆ, ಪಂಚತಂತ್ರ, ಇ–ಗ್ರಾಮ, ತಾಂತ್ರಿಕ ಸಮಸ್ಯೆಗಳು ಸೇರಿ ಒಟ್ಟು 9 ಬಗೆಯ ಸಮಸ್ಯೆಗಳಿಗೆ ದೂರವಾಣಿ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದರು.ಸಂಘದ ಜಿಲ್ಲಾ ಘಟಕ ಅಧ್ಯಕ್ಷ ವೈ.ಎಲ್.ಗಂಗಾಧರ್ ನಾಯ್ಕ್, ಉಪಾಧ್ಯಕ್ಷ ಮೋಹನ್ ಕುಮಾರ್, ಸಂಘದ ಗೌರವ ಅಧ್ಯಕ್ಷ ಎಸ್.ರಮೇಶ್, ಬಿ.ಎಂ.ದಿಲೀಪ್ ಕುಮಾರ್, ಡಿ.ಹರೀಶ್, ಅನುಪಮಾ ಚೆನ್ನಪ್ಪ, ಬಿ.ಎಂ.ಸಂಗಮೇಶ್, ಟಿ.ಪ್ರಶಾಂತ ಬಾಬು, ಎಚ್.ಆರ್.ಗಿರೀಶ, ಶರತ್ ಕುಮಾರ್, ಮಂಜುನಾಥ ಶೆಟ್ಟಿ, ಎಚ್.ಪಿ.ರವೀಶ್, ಅನಿಲ್ ಕುಮಾರ್ ಸೇರಿ ಪಿಡಿಒ ಅಧಿಕಾರಿಗಳು ಇದ್ದರು.