ಸಾರಾಂಶ
ರೈತರ ಜಮೀನು ಸೇರಿದಂತೆ ಸರ್ಕಾರಿ ಜಮೀನುಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ವಕ್ಫ್ ಬೋರ್ಡ್‌ನ್ನು ರಾಜ್ಯದಿಂದಲೇ ತೊಲಗಿಸುವಂತೆ ಆಗ್ರಹಿಸಿ ಜ.20ರಂದು ಶ್ರೀರಂಗಪಟ್ಟಣ ಬಂದ್‌ಗೆ ವಿವಿಧ ಸಂಘಟನೆಗಳಿಂದ ಕರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ರೈತರ ಜಮೀನು ಸೇರಿದಂತೆ ಸರ್ಕಾರಿ ಜಮೀನುಗಳ ಆರ್‌ಟಿಸಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗುತ್ತಿರುವ ಹಿನ್ನೆಲೆಯಲ್ಲಿ ಶಾಶ್ವತ ವಕ್ಫ್ ಬೋರ್ಡ್‌ನ್ನು ರಾಜ್ಯದಿಂದಲೇ ತೊಲಗಿಸುವಂತೆ ಆಗ್ರಹಿಸಿ ಜ.20ರಂದು ಶ್ರೀರಂಗಪಟ್ಟಣ ಬಂದ್‌ಗೆ ವಿವಿಧ ಸಂಘಟನೆಗಳು ಕರೆ ನೀಡಿದವು.ಪಟ್ಟಣ ತಾಲೂಕು ಕಚೇರಿ ಎದುರಿನ ಶ್ರೀಲಕ್ಷ್ಮಿ ನರಸಿಂಹ ದೇವಸ್ಥಾನದ ಆವರಣದಲ್ಲಿ ಸಭೆ ನಡೆಸಿದ ಹಿಂದೂ ಜಾಗರಣಾ ವೇದಿಕೆ, ಆರ್‌ಎಸ್‌ಎಸ್, ರೈತ ಸಂಘ, ಒಕ್ಕಲಿಗರ ಸಂಘ, ಸವಿತ ಸಮಾಜ, ದಲಿತ ಸಂಘಟನೆ, ಪುರಸಭಾ ಸದಸ್ಯರು, ವಕೀಲರು ಸೇರಿದಂತೆ ಪಕ್ಷಾತೀತವಾಗಿ ವಿವಿಧ ಸಂಘಟನೆಗಳು ಒಗ್ಗೂಡಿ ತಾಲೂಕು ರೈತ ಹಿತ ರಕ್ಷಣಾ ಸಮಿತಿ ಹೆಸರಲ್ಲಿ ವಕ್ಫ್ ಮಂಡಳಿ ವಿರುದ್ಧ ಬೃಹತ್ ಹೋರಾಟಕ್ಕೆ ಕರೆ ನೀಡಲಾಯಿತು.
ಅಂದು ತಾಲೂಕಿನಾದ್ಯಂತ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಪ್ರತಿಯೊಬ್ಬರು ಸಹಕಾರ ನೀಡುವ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ಜೊತೆಗೆ ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ಇರುವ ಕುವೆಂಪು ವೃತ್ತದಿಂದ ತಾಲೂಕು ಕಚೇರಿ ವರೆವಿಗೂ ಪ್ರತಿಭಟನೆ ನಡೆಸಲಾಗುವುದು.ಪ್ರತಿಭಟನಾ ಸ್ಥಳಕ್ಕೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಗಮಿಸಿ ವಕ್ಫ್ ಬೋರ್ಡ್ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸಲು ದಿನಾಂಕ ನಿಗದಿ ಮಾಡಿ ಕಾರ್ಯ ಪ್ರೌವೃತ್ತರಾಗಬೇಕು. ಇಲ್ಲದಿದ್ದರೆ ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಶ್ರೀರಂಗಪಟ್ಟಣ ತಾಲೂಕಿನಲ್ಲಿ ರೈತರ ಜಮೀನು, ದೇಗುಲ, ಶಾಲೆ, ಸೇರಿದಂತೆ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಸ್ಮಾರಕಗಳನ್ನು ವಕ್ಫ್ ಬೋರ್ಡ್ ಹೆಸರಿಗೆ ಸೇರಿಸಿಕೊಳ್ಳುತ್ತಿರುವ ಹಿನ್ನೆಲೆ ವಿವಿಧ ಸಂಘಟನೆಗಳ ನೂರಾರು ಮಂದಿ ಮುಖಂಡರು ಸಭೆ ನಡೆಸಿ ತಾಲೂಕಿನ ಜನತೆ ಬೃಹತ್ ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದರು.ಕನ್ನಡಪ್ರಭ ಫಲಶೃತಿ:
70 ಕ್ಕೂ ಹೆಚ್ಚು ಆರ್‌ಟಿಸಿಯಲ್ಲಿ ವಕ್ಫ್ ಹೆಸರು ಎಂಬ ಶೀರ್ಷಿಕೆಯಡಿ ಕನ್ನಡಪ್ರಭದಲ್ಲಿ ಕಳೆದ ಜ.5 ರಂದು ವರದಿ ಮಾಡಿ ಬೆಳಕು ಚೆಲ್ಲಿತ್ತು. ಎಚ್ಚೆತ್ತ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸಭೆ ನಡೆಸಿ ಹಲವು ನಿರ್ಣಯಗಳನ್ನ ಕೈಗೊಂಡವು.