ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ದೇಶ ಕಂಡ ಮಹಾನ್ ಚೇತನಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಪದ್ಮಭೂಷಣ ಕೆ.ಎಸ್.ತಿಮ್ಮಯ್ಯ ಅವರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿರುವ ಆರೋಪಿಯನ್ನು ವಾರದೊಳಗೆ ಗಡಿಪಾರು ಮಾಡದಿದ್ದರೆ ತೀವ್ರ ಹೋರಾಟ ರೂಪಿಸುವುದಾಗಿ ವಿವಿಧ ಕೊಡವ ಸಂಘಟನೆಗಳು ಎಚ್ಚರಿಕೆ ನೀಡಿವೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಕೀತಿಯಂಡ ವಿಜಯಕುಮಾರ್, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ, ಕಾರ್ಯದರ್ಶಿ ಕುಂಞರ ಗಿರೀಶ್ ಭೀಮಯ್ಯ, ಕನೆಕ್ಟಿಂಗ್ ಕೊಡವಾಸ್ ಸಂಚಾಲಕ ಶಾಂತೆಯಂಡ ನಿರನ್ ನಾಚಪ್ಪ, ಒಡಿಯಂಡ ನವೀನ್ ತಿಮ್ಮಯ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಚೊಟ್ಟೆಯಂಡ ಸಂಜುಕಾವೇರಪ್ಪ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು. ವೀರ ಸೇನಾನಿಗಳಿಗೆ ಅಪಮಾನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯ ಕ್ಷಮತೆಯನ್ನು ಅಭಿನಂದಿಸುತ್ತೇವೆ. ಈ ಪ್ರಕರಣ ಮರು ತನಿಖೆಗೆ ಒಳಪಡಿಸಿ ಗಡಿಪಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ. ಆರೋಪಿಯನ್ನು ಅಮಾನತು ಮಾಡಿದ ವಕೀಲರ ಸಂಘವನ್ನು ಕೂಡ ಅಭಿನಂದಿಸುವುದಾಗಿ ಹೇಳಿದರು.
ಆರೋಪಿಯನ್ನು ಬಂಧಿಸುವಲ್ಲಿ ಶ್ರಮ ವಹಿಸಿದ ಪೊಲೀಸರು, ಇತರಸಂಘಟನೆಗಳು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ್ದರೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಪೊಲೀಸರು ಸುಮೋಟೋ ದಾಖಲಿಸಿದ ಪರಿಣಾಮ ಇಂದು ನಾವು ಮೇಲ್ಮನವಿ ಸಲ್ಲಿಸಲೂ ತೊಂದರೆಯಾಗುತ್ತಿದೆ. ತಕ್ಷಣ ಪೊಲೀಸರು ಪ್ರಕರಣದ ಮರು ತನಿಖೆಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.ಪೊಲೀಸರು ಬಲವಾದ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಮತ್ತೆ ಬಂಧಿಸಲು ಅವಕಾಶವಿದೆ ಎಂದು ಪ್ರತಿಪಾದಿಸಿದ ಅವರು, ಪರಸ್ಪರರನ್ನು ಎತ್ತಿಕಟ್ಟಿ ಒಡಕು ಮೂಡಿಸುತ್ತಿರುವ ವ್ಯಕ್ತಿಯನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ತಡೆಯಲು ಆರೋಪಿಗೆ ನೀಡುವ ಶಿಕ್ಷೆ ಮಾದರಿಯಾಗಬೇಕು ಎಂದರು.