ಸಾರಾಂಶ
ಕನಕಪುರ: ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ದಲಿತ ಪರ, ರೈತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಕನಕಪುರ: ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ತಾಲೂಕಿನ ದಲಿತ ಪರ, ರೈತಪರ ಹಾಗೂ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಬಸಪ್ಪ ವೃತ್ತದ ಅಶೋಕ ಸ್ಥಂಭದ ಬಳಿ ಸೇರಿದ ದಲಿತ ಪರ, ಕನ್ನಡ ಪರ, ರೈತಪರ ಹಾಗೂ ಪ್ರಗತಿ ಪರ ಸಂಘಟನೆಗಳ ನೂರಾರು ಪ್ರತಿಭಟನಾಕಾರರು ಶಾಸಕ ಮುನಿರತ್ನ ವಿರುದ್ಧ ಘೋಷಣೆ ಕೂಗುತ್ತಾ ಎಂ.ಜಿ.ರಸ್ತೆಯಲ್ಲಿ ಸಾಗಿ ಸರ್ಕಾರಿ ತಾಯಿ ಮತ್ತು ಮಗು ಆಸ್ಪತ್ರೆಯ ಮುಂಭಾಗದ ವೃತ್ತದವರೆಗೂ ಆಗಮಿಸಿ ರೂರಲ್ ಕಾಲೇಜು ಮುಂಭಾಗದ ಅಶೋಕ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ದಲಿತ ಮುಖಂಡ ಜೆ.ಎಂ.ಶಿವಲಿಂಗಯ್ಯ ಮಾತನಾಡಿ, ದಲಿತ ವಿರೋಧಿ, ಒಕ್ಕಲಿಗ ಸಮುದಾಯ ನಿಂದನೆ ಹಾಗೂ ಮಹಿಳೆಯರ ಬಗ್ಗೆ ತುಚ್ಛವಾಗಿ ಮಾತನಾಡಿದ ಶಾಸಕ ಮುನಿರತ್ನರನ್ನು ಒಂದು ಕ್ಷಣವೂ ಇಲ್ಲಿನ ನೆಲದಲ್ಲಿ ಇರಿಸಬಾರದು, ಶಾಶ್ವತವಾಗಿ ಗಡಿಪಾರು ಮಾಡಬೇಕು. ಇಂತಹವರ ಗಡಿಪಾರಿನಿಂದ ದಲಿತರು, ಹಿಂದುಳಿದವರು, ಮಹಿಳೆಯರು ನೆಮ್ಮದಿಯಿಂದ ಬದುಕಬಹುದು ಎಂದು ಹೇಳಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಶಾಸಕ ಮುನಿರತ್ನ ಹೇಳಿಕೆ ಬಹಳ ಅಮಾನವೀಯವಾಗಿದ್ದು, ಇಂತಹ ವ್ಯಕ್ತಿಯನ್ನು ಬಿಜೆಪಿ ತಕ್ಷಣವೇ ಪಕ್ಷದಿಂದ ಉಚ್ಛಾಟನೆ ಮಾಡಬೇಕು. ನ್ಯಾಯಾಲಯ ಕೂಡ ಇಂತವರಿಗೆ ತಕ್ಷಣವೇ ಜಾಮೀನು ನೀಡಿದ್ದು, ಇಂತವರು ಪರಿವರ್ತನೆಯಾಗಲು ಸಾಧ್ಯವಿಲ್ಲ. ಇಂತಹ ಮಾನಗೆಟ್ಟವರನ್ನು ವರ್ಷಾನುಗಟ್ಟಲೆ ಜೈಲಿನಲ್ಲಿ ಇರಿಸಬೇಕು. ಸಮಾಜಕ್ಕೆ ಕಂಟಕಪ್ರಾಯವಾದ ಇಂತವರನ್ನು ಗಡಿಪಾರು ಮಾಡಲು ನ್ಯಾಯಧೀಶರು ಆದೇಶಿಸಬೇಕು ಎಂದು ಆಗ್ರಹಿಸಿದರು.ದಲಿತ ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ಶಾಸಕ ಮುನಿರತ್ನ ರೌಡಿಸಂ ಹಿನ್ನೆಲೆಯಿಂದ ಬಂದವನು. ಇಂತಹವನಿಂದ ಕೀಳು ವರ್ತನೆಯಲ್ಲದೆ ಮತ್ತೇನು ನೀರೀಕ್ಷಿಸಲು ಸಾಧ್ಯ ಎಂದರು.
ಬಳಿಕ ಪ್ರತಿಭಟನಾಕಾರರು ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಚೀಲೂರು ಮುನಿರಾಜು, ದಲಿತ ಪರ ನಾಯಕರಾದ ಪ್ರಶಾಂತ್ ಹೊಸದುರ್ಗ, ಮಳಗಾಳು ದಿನೇಶ್, ನಟರಾಜ್, ನೀಲಿ ರಮೇಶ್, ನವೀನ್ ಕುಮಾರ್ , ಛಲವಾದಿ ನವೀನ್, ರಾಜ್, ಕೆಆರ್‌ಎಸ್ ಪಕ್ಷದ ಕೋಡಿಹಳ್ಳಿ ಚಿಕ್ಕಸ್ವಾಮಿ, ಶಿವಮ್ಮ, ಗೋಪಿ, ಸೋಮಣ್ಣ, ಜೀವನ್, ಕನ್ನಡ ಭಾಸ್ಕರ್, ಶೇಷಣ್ಣ , ಮಲ್ಲೇಶ್, ಶಾಂತಣ್ಣ, ಗುಂಡಣ್ಣ, ಕುರುಬರಹಳ್ಳಿ ನವೀನ್, ನಲ್ಲಹಳ್ಳಿ ಶ್ರೀನಿವಾಸ್ ಭಾಗವಹಿಸಿದ್ದರು.