ಸಮಾಜ ಸೇವೆ ಮಾಡಲು ಸೇವಾಭಾರತಿ, ಸೇವಾಧಾಮ ಸಂಸ್ಥೆಗಳು ದೇಶಕ್ಕೆ ಮಾದರಿ : ಶಾಸಕ ಹರೀಶ್ ಪೂಂಜ

| Published : Sep 23 2024, 01:37 AM IST / Updated: Sep 23 2024, 11:27 AM IST

ಸಮಾಜ ಸೇವೆ ಮಾಡಲು ಸೇವಾಭಾರತಿ, ಸೇವಾಧಾಮ ಸಂಸ್ಥೆಗಳು ದೇಶಕ್ಕೆ ಮಾದರಿ : ಶಾಸಕ ಹರೀಶ್ ಪೂಂಜ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಗಾಲಿಕುರ್ಚಿ ಜಾಥಾ ಮತ್ತು ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಬೆಳ್ತಂಗಡಿ : ನಿಜ ಅರ್ಥದಲ್ಲಿ ಸಮಾಜ ಸೇವೆ ಮಾಡಲು ಸೇವಾಭಾರತಿ, ಸೇವಾಧಾಮ ಸಂಸ್ಥೆಗಳು ದೇಶಕ್ಕೆ ಮಾದರಿಯಾಗಿವೆ. ಜೀವನ ನಶ್ವರವೆಂದು ಭಾವಿಸುವ ಜನರಿಗೆ ಬದುಕಿನಲ್ಲಿ ಬೆಳಕು ನೀಡುವ ಮೂಲಕ ಸಮಾಜದ ಜತೆಗೆ ಬದುಕಬಹುದೆಂಬ ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದರು.

ಅವರು ಸೆ. 21ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಕನ್ಯಾಡಿಯ ಸೇವಾಭಾರತಿ, ಸೌತಡ್ಕದ ಸೇವಾಧಾಮ ನೇತೃತ್ವದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಉಜಿರೆ ಎಸ್ ಡಿ ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಹಭಾಗಿತ್ವದಲ್ಲಿ ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆಯ ಪ್ರಯುಕ್ತ ಗಾಲಿಕುರ್ಚಿ ಜಾಥಾ ಮತ್ತು ಬೆನ್ನುಹುರಿ ಅಪಘಾತದ ಬಗ್ಗೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಸೇವಾ ಯೋಜನೆ ಸೇವೆಗಾಗಿ ನಾವು ಎಂಬ ಪರಿಕಲ್ಪನೆಯಲ್ಲಿ ಸಮಾಜಸೇವೆಯಲ್ಲಿ ಸಮರ್ಪಿಸಿ ಕೊಂಡಿದೆ. ನಮ್ಮ ಉದ್ಯೋಗ, ವ್ಯವಹಾರಗಳಲ್ಲಿ ಗಳಿಕೆಯ ಸ್ವಲ್ಪ ಅಂಶವನ್ನು ಸಮಾಜಕ್ಕೆ ನೀಡುವ ಮೂಲಕ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಶಾಸಕರು ನುಡಿದರು.

ಒಂದು ಅಧ್ಯಯನ ದಂತೆ ರಾಜ್ಯದಲ್ಲಿ ಕ್ಯಾನ್ಸರ್ ಪೀಡಿತರು ಅತಿ ಹೆಚ್ಚು ಜನರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಅದು ಹರಡಲು ಒಂದು ಕಾರಣ ಆಹಾರ ಪದ್ಧತಿ. ಇಂದಿನ ಆಹಾರ ಪದಾರ್ಥಗಳಲ್ಲಿ ಶೇ. 95 ರಾಸಾಯನಿಕ ಕೆಮಿಕಲ್ ತುಂಬಿರುವುದೇ ಕಾರಣ. ಎನ್ ಎಸ್ ಎಸ್ ವಿದ್ಯಾರ್ಥಿಗಳು ಮನೆಯವರಿಗೆ ಹೇಳಿ ತಮಗೆ ಆಸ್ತಿ , ದುಡ್ಡು ಮಾಡಿಡದೆ ರಾಸಾಯನಿಕ ರಹಿತ ಸಾವಯವ ತರಕಾರಿ ಬೆಳೆಸಿ ಆರೋಗ್ಯಪೂರ್ಣ ಬದುಕಿನ ರಕ್ಷಣೆಗೆ ನೆರವಾಗುವಂತೆ ತಿಳಿಸಲು ಕಿವಿಮಾತು ಹೇಳಿದರು.

ಕನ್ಯಾಡಿಯಲ್ಲಿ ೦. 1೦ ಸೆಂಟ್ಸ್ ನಿವೇಶನದಲ್ಲಿ ಸೇವಾಭಾರತಿಯ ಸ್ವಂತ ಕಟ್ಟಡ ನಿರ್ಮಾಣ ದಲ್ಲಿ ಒಂದು ಮಹಡಿಯನ್ನು ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಬೆಳ್ತಂಗಡಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರಕಾಶ್ ಪ್ರಭು ಸೇವಾಭಾರತಿಯ ಸಮಾಜಸೇವಾ ಕಾರ್ಯದಲ್ಲಿ ರೋಟರಿ ಕ್ಲಬ್ ಸದಾ ಜತೆಗಿರುತ್ತದೆ ಎಂದು ಹೇಳಿ ತನ್ನ ಪೆನ್ಷನ್ ಮೊತ್ತ 5,೦೦೦ ರು. ವನ್ನು ಪ್ರೀತಿಯ ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.

ಉಜಿರೆ ಎಸ್ ಡಿ ಎಂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ದೇಹಕ್ಕೆ ನ್ಯೂನತೆ ಬರಬಹುದು. ಆದರೆ ಮನಸ್ಸಿಗೆ ನ್ಯೂನತೆ ಬರಬಾರದು ಎಂದು ನುಡಿದು ಸೇವಾಭಾರತಿಯೊಂದಿಗೆ ಕಾಲೇಜಿನ ಎನ್ ಎಸ್ ಎಸ್ ಅಳಿಲುಸೇವೆ ಮಾಡುತ್ತಿದೆ ಎಂದರು.

ಮಾಜಿ ಸೈನಿಕ ಡಿ ಎಂ ಗೌಡ ಮತ್ತು ಮಂಗಳೂರು ಕೆ ಎಂ ಸಿ ಆಸ್ಪತ್ರೆಯ ಪಿ ಎಂ ಆರ್ ಡಾ. ಆನ್ ಮೇರಿ ಜಾನ್ ಶುಭಾಶಂಸನೆಗೈದರು. ಸೇವಾಧಾಮದ ಸಂಚಾಲಕ ಪುರಂದರ ರಾವ್ ಸೇವಾಧಾಮ ನಿರ್ವಹಣೆಗೆ ವರ್ಷಕ್ಕೆ 4೦ರಿಂದ 5೦ ಲಕ್ಷ ಖರ್ಚು ಬರುತ್ತಿದ್ದು ದಾನಿಗಳು, ಸಾರ್ವಜನಿಕರು ಸೇವಾನಿಧಿಗೆ ದೇಣಿಗೆ ನೀಡಿ ಕೈಜೋಡಿಸುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಪಾಲಿಸಿ ತಮ್ಮ ರಕ್ಷಣೆ ಮಾಡಿಕೊಳ್ಳಬೇಕು. ಇತರರನ್ನು ಪ್ರೀತಿಸಿ, ಗೌರವಿಸಿ ಎಂದರು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣಪಡುವೆಟ್ನಾಯರು ದಿವ್ಯಾಂಗರಿಗೆ ಪುಷ್ಪ,ಗುಚ್ಛ ನೀಡಿ ಸ್ವಾಗತಿಸಿದರು.

ಸಮಾರಂಭದಲ್ಲಿ 8 ಮಂದಿ ದಿವ್ಯಾಂಗರಿಗೆ ಸೆಲ್ಫ್ ಕೇರ್ ಕಿಟ್, ಇಬ್ಬರಿಗೆ ಹಾಸಿಗೆಯನ್ನು ಪ್ರಭಾಕರ ಹೆಗ್ಡೆ ವಿತರಿಸಿದರು. ವೇದಿಕೆಯಲ್ಲಿ ಎಸ್ ಡಿ ಎಂ ಕಾಲೇಜು ಎನ್ ಎಸ್ ಎಸ್ ಯೋಜನಾಧಿಕಾರಿ ದೀಪಾ ಆರ್ ಪಿ , ಉಡುಪಿ ಜಿಲ್ಲೆಯ ಸರ್ವೋತ್ತಮ ಅಮೀನ್ ಉಪಸ್ಥಿತರಿದ್ದರು.

ಸೇವಾಧಾಮ ಸಂಸ್ಥಾಪಕ ಕೆ.ವಿನಾಯಕ ರಾವ್ ಪ್ರಸ್ತಾವಿಸಿ ಸೇವಾಧಾಮ ಪುನಶ್ಚೇತನ ಕೇಂದ್ರದ ಮೂಲಕ 211, ಮಂದಿ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಲಾಗಿದ್ದು ಇಂದಿನ ಗಾಲಿ ಕುರ್ಚಿ ಜಾಥಾದಲ್ಲಿ 2೦ ಮಂದಿ ದಿವ್ಯಾಂಗರು ಭಾಗವಹಿಸಿದ್ದಾರೆ. ಕನ್ಯಾಡಿಯ ೦. 1೦ ಸೆಂಟ್ಸ್ ನಿವೇಶನದಲ್ಲಿ ಎಂ ಆರ್ ಪಿ ಎಲ್ ಮತ್ತಿತರ ಸಂಘಸಂಸ್ಥೆಗಳ ನೆರವಿನಿಂದ ಸ್ವಂತ ಕಟ್ಟಡ ನಿರ್ಮಿಸುವ ಯೋಜನೆಗೆ ದಾನಿ ಸಂಸ್ಥೆಗಳು ಕೈಜೋಡಿಸುವಂತೆ ವಿನಂತಿಸಿಕೊಂಡರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಡಾ!ಆನ್ ಮೇರಿ ಜಾನ್ ವೈದ್ಯಕೀಯ ಸಮಾಲೋಚನೆ ನಡೇಸಿದರು.

ಗಾಲಿಕುರ್ಚಿ ಜಾಥಾ :ಉಜಿರೆ ಎಸ್ ಡಿ ಎಂ ಪಿ ಜಿ. ಕಾಲೇಜಿನಿಂದ ಉಜಿರೆಯ ಮುಖ್ಯ ವೃತ್ತಕ್ಕಾಗಿ , ಶ್ರೀ ಶಾರದಾ ಮಂಟಪಕ್ಕೆ ದಿವ್ಯಾಂಗರ ಗಾಲಿಕುರ್ಚಿ ಜಾಥಾಕ್ಕೆ, ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಚಾಲನೆ ನೀಡಿದರು. ಪದ್ಮನಾಭ ಶೆಟ್ಟಿಗಾರ್, ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಉಪಸ್ಥಿತರಿದ್ದರು.