ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಬಂಧಿಸಿ, ಜೈಲಿಗೆ ಹಾಕಿರುವ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ವಿಜಯಪುರ ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಬಂಧಿಸಿ, ಜೈಲಿಗೆ ಹಾಕಿರುವ ಸರ್ಕಾರದ ಕ್ರಮ ಖಂಡಿಸಿ ಪಟ್ಟಣದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನ ಹೋರಾಟ ಸಮಿತಿ, ಜನ ವೇದಿಕೆ ಮತ್ತು ವಿವಿಧ ಪ್ರಗತಿಪರ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ನಿಂಗಣ್ಣ ಬಿರಾದಾರ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ಕರವೇ ತಾಲೂಕು ಅಧ್ಯಕ್ಷ ರಹೀಮಾನ್ ಕನಕಲ್ ಮಾತನಾಡಿ, ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಹೋರಾಟಗಾರರಿಗೆ ಪ್ರಾಣ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ಒದಗಿಸಬೇಕು ಎಂದರು. ಸ್ವ ಸಹಾಯ ಸಂಘದ ಸಿಸ್ಟರ್ ಹೃದಯ ಮಾತನಾಡಿ, ಹುಣಶ್ಯಾಳದ ಸಂಗನಬಸವ ಸ್ವಾಮೀಜಿ ಸೇರಿದಂತೆ ಎಲ್ಲ ಹೋರಾಟಗಾರರ ಮೇಲೆ ದೌರ್ಜನ್ಯ ಎಸಗಿದ ಪೊಲೀಸರ ನಡೆ ಖಂಡನೀಯ ಕೂಡಲೇ ಬಂಧಿಸಿರುವ ಹೋರಾಟಗಾರರನ್ನು ಬೇಷರತ್ ಬಿಡುಗಡೆಮಾಡಬೇಕು ಎಂದು ಆಗ್ರಹಿಸಿದರು .ರಾಷ್ಟ್ರೀಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ನೂರಾರು ದಿನಗಳಿಂದ ಪ್ರತಿಭಟಿಸುತ್ತಿದ್ದ ಹೋರಾಟಗಾರರ ಮೇಲೆ ದೂರು ದಾಖಲೆಸಿರುವುದು ಖಂಡನಿಯ, ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ ಎಂದರು.
ಸ್ವಸಹಾಯ ಸಂಘದ ಮಹಿಳಾ ಮುಖಂಡೆ ಶಾಂತಾ ದೇಗಿನಾಳ, ಜೈನಾಬಿ ಮರೋಳ, ಜೈನಾಬಿ ಮೊಮೀನ, ಕರೆಪ್ಪ ಹೊಸಮನಿ, ಹಸನಸಾಬ ಬಾಗವಾನ, ದೀಲಿಪ ದೋಡಮನಿ, ಹಸನಸಾಬ ನದಾಫ್, ಅಶೋಕ ಗೊಲ್ಲರ, ಸುರೇಶ ಕೊಕಟನೂರ, ಪಿಂಟೊ ಬಾಸುತ್ಕರ, ಕರೆಪ್ಪ ಹೊಸಮನಿ, ಜಂಬಣ್ಣ ದುರಗಮುರಗಿ, ಸುರೇಶ ಕೋಕಠನೂರ, ಬೌರಮ್ಮ ಸೇರಿ ಇತರರಿದ್ದರು.