ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ್ ವರದಿ ಅಂತಿಮ ಎಂಬ ನಿರ್ಣಯವನ್ನು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಸೇರಿ ವಿವಿಧ ಕನ್ನಡಪರ ಸಂಘಟನೆಗಳು ಪಾಲಿಕೆ ಕಚೇರಿ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪಾಲಿಕೆಯ ಸಭೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ್ ವರದಿ ಅಂತಿಮಗೊಳಿಸಿ,ನಿರ್ಣಯ ಪಾಸ್ ಮಾಡುವವರೆಗೂ ಪ್ರತಿಭಟನೆ ಹಿಂಪಡಿಯುವುದಿಲ್ಲ ಎಂದು ಪಟ್ಟು ಹಿಡಿದು, ಪಾಲಿಕೆ ಕಚೇರಿಗೆ ಮುತ್ತಿಗೆಗೆ ಯತ್ನಿಸಿದರು. ಆಗ ಆಗಮಿಸಿದ ಮೇಯರ್, ಉಪಮೇಯರ್ ಹಾಗೂ ಪಾಲಿಕೆ ಆಯುಕ್ತರು ಬೇಡಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಭರವಸೆ ನೀಡಿದರ. ಆದಾಗ್ಯೂ ಸಭೆಯಲ್ಲಿ ಚರ್ಚಿಸುವವರೆಗೂ ಧರಣಿ ಹಿಂಪಡಿಯಲ್ಲ ಎಂದು ಪ್ರತಿಭಟನೆ ಮುಂದುವರಿಸಿದರು.

ಈ ವೇಳೆ ಶ್ರೀನಿವಾಸ್ ತಾಳೂಕರ ಮಾತನಾಡಿ, 2005ರಲ್ಲಿ ಪಾಲಿಕೆಯಲ್ಲಿ ಮಹಾರಾಷ್ಟ್ರ ಪರ ನಿರ್ಣಯ ಕೈಗೊಂಡು, ಅದನ್ನೇ ದಾಖಲೆಯನ್ನಾಗಿಸಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ. ಈಗ ಪಾಲಿಕೆಯಲ್ಲಿ ಕನ್ನಡ ಮೇಯರ್, ಉಪಮೇಯರ್ ಇರುವುದರಿಂದ ಕನ್ನಡದ ಕುರಿತಾಗಿ ಐತಿಹಾಸಿಕ ನಿರ್ಣಯ ಕೈಗೊಳ್ಳಲು ಸಮಯ ಕೂಡಿಬಂದಿದೆ. ಹೀಗಾಗಿ, ವಿಳಂಬ ಮಾಡದೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಹಾಗೂ ಮಹಾಜನ್ ವರದಿ ಅಂತಿಮಗೊಳಿಸಿಬೇಕು ಎಂದು ಆಗ್ರಹಿಸಿದರು.

ಕರವೇ ಜಿಲ್ಲಾಧ್ಯಕ್ಷ ವಾಜೀದ ಹಿರೇಕೂಡಿ ಮಾತನಾಡಿ, ರಾಜಕೀಯ ದುರುದ್ದೇಶದಿಂದ ಕನ್ನಡ ಪರ ನಿರ್ಣಯ ಕೈಗೊಳ್ಳುವಲ್ಲಿ ಪಾಲಿಕೆ ಹಿಂಜರಿಕೆ ಹಾಕುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಇನ್ನಾದರೂ ಪಾಲಿಕೆ ಮೇಯರ್,ಉಪಮೇಯರ್, ನಗರಸೇವಕರು ಹಾಗೂ ಅಧಿಕಾರಿಗಳ ವರ್ಗ ಸೇರಿ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.


ಪ್ರತಿಭಟನೆಯಲ್ಲಿ ಬಲರಾಮ ಮಾಸೇನಟ್ಟಿ, ಶಿವರೆಡ್ಡಿ.ಎಚ್, ಎಸ್.ಎಸ್.ಮೂಕನವರ, ಸಂಗೀತಾ ಕಾಂಬಳೆ, ಬಾಳಪ್ಪ ಗುಡಿಗೇನಟ್ಟಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.