ನಿರಂತರ ಧರಣಿಗೆ ಸಂಘಟನೆಗಳ ಬೆಂಬಲ

| Published : Oct 26 2023, 01:00 AM IST / Updated: Oct 26 2023, 01:01 AM IST

ನಿರಂತರ ಧರಣಿಗೆ ಸಂಘಟನೆಗಳ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ನಿರಂತರ ಧರಣಿಗೆ ಸಂಘಟನೆಗಳ ಬೆಂಬಲಅಲ್ಪಸಂಖ್ಯಾತ ಮುಖಂಡರು, ಸ್ತ್ರೀಶಕ್ತಿ ಮಹಿಳೆಯರ ಸಾಥ್ನೀರು ನಿಲ್ಲಿಸದ ಸರ್ಕಾರದ ವಿರುದ್ಧ ಆಕ್ರೋಶ
- ಅಲ್ಪಸಂಖ್ಯಾತ ಮುಖಂಡರು, ಸ್ತ್ರೀಶಕ್ತಿ ಮಹಿಳೆಯರ ಸಾಥ್ - ನೀರು ನಿಲ್ಲಿಸದ ಸರ್ಕಾರದ ವಿರುದ್ಧ ಆಕ್ರೋಶ ಕನ್ನಡಪ್ರಭ ವಾರ್ತೆ ಮಂಡ್ಯ ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ನಿಲುವನ್ನು ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ಬುಧವಾರ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ನಡೆಸುತ್ತಿರುವ ನಿರಂತರ ಧರಣಿಯಲ್ಲಿ ಜಾತ್ಯತೀತ ಜನತಾದಳ ಪಕ್ಷದ ಅಲ್ಪಸಂಖ್ಯಾತ ಮುಖಂಡರು, ಸ್ತ್ರೀ ಶಕ್ತಿ ಮಹಿಳೆಯರು, ಮಹಿಳಾ ಸಂಘಟನೆಗಳ ಕಾರ್ಯಕರ್ತೆಯರು ಪಾಲ್ಗೊಂಡರು. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ-ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ಬೆಂಬಲ ಸೂಚಿಸಿ ಪಕ್ಷದ ಅಲ್ಪಸಂಖ್ಯಾತ ಮುಖಂಡರ ಜೊತೆಗೂಡಿ ಧರಣಿಯಲ್ಲಿ ಭಾಗಿಯಾದರು. ಮಾಜಿ ಸಂಸದ ಜಿ.ಮಾದೇಗೌಡ ನೇತೃತ್ವದ ಕಾವೇರಿ ಹೋರಾಟವನ್ನು ಸ್ಮರಿಸಿದ ಅವರು ಮೌನಚರಣೆ ಮೂಲಕ ಗೌರವ ಸಮರ್ಪಿಸಿದರು. ನಗರಸಭೆ ಜೆಡಿಎಸ್ ಸದಸ್ಯರಾದ ನಾಗೇಶ್, ಮೀನಾಕ್ಷಿ ಪುಟ್ಟಸ್ವಾಮಿ, ಮಾಜಿ ಸದಸ್ಯ ಮುಜಾಯಿದ್, ಮಹಮ್ಮದ್, ಅಫ್ಜಲ್, ಫೈರೋಜ್, ಮುಜಾಸಿರ್ ಇತರರಿದ್ದರು. ಕಾವೇರಿ ಹೋರಾಟ ಬೆಂಬಲಿಸಿ ಸ್ತ್ರೀಶಕ್ತಿ ಮಹಿಳೆಯರು ಹಾಗೂ ಮಹಿಳಾ ಸಂಘಟನೆಗಳ ಕಾರ್ಯಕರ್ತರು ನಿರಂತರ ಧರಣಿಯಲ್ಲಿ ಭಾಗಿಯಾದರು. ಜ್ಯೋತಿ ಸಂಜೀವಿನಿ, ಸ್ಪಂದನ, ಅಖಂಡ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳಾ ಘಟಕ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಕಾವೇರಿ ಹೋರಾಟ ಬೆಂಬಲಿಸಿದರು. ಸುಜಾತ ಸಿದ್ದಯ್ಯ, ಅನುಪಮಾ, ಸೌಭಾಗ್ಯ, ಶಿವರತ್ನಮ್ಮ, ವೀಣಾ, ತಾಯಮ್ಮ, ಸುಶೀಲಮ್ಮ ನೇತೃತ್ವ ವಹಿಸಿದ್ದರು. ಕಾಟೇರ ಚಿತ್ರದ ಖಳನಟ ಶ್ರೀರಂಗಪಟ್ಟಣದ ಮಂಜುಕುಮಾರ್, ರಾಘವೇಂದ್ರ, ಪತ್ರಕರ್ತ ಸೋಮಶೇಖರ್ ನೇತೃತ್ವದ ತಂಡ ಹೋರಾಟವನ್ನು ಬೆಂಬಲಿಸಿತು. ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ.ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್‌, ಕನ್ನಡ ಸೇನೆ ಮಂಜುನಾಥ್ ನೇತೃತ್ವ ವಹಿಸಿದ್ದರು. (ಬಾಕ್ಸ್) ಬ್ರಿಟಿಷರ ಕಾಲದ ಕಾವೇರಿ ಒಪ್ಪಂದ ರದ್ದಾಗಲಿ: ಜಫ್ರುಲ್ಲಾಖಾನ್ ಕನ್ನಡಪ್ರಭ ವಾರ್ತೆ ಮಂಡ್ಯ ಬ್ರಿಟಿಷರ ಕಾಲದಲ್ಲಿ ಮಾಡಿಕೊಂಡ ಕಾವೇರಿ ಒಪ್ಪಂದವನ್ನು ರದ್ದುಪಡಿಸಬೇಕು. ಇಂದಿನ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ವೈಜ್ಞಾನಿಕವಾಗಿ ವರದಿ ತಯಾರಿಸಿ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಟ್ಟರೆ ಮಾತ್ರ ನಮಗೆ ನ್ಯಾಯ ಸಿಗಲು ಸಾಧ್ಯ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾಖಾನ್ ಪ್ರತಿಪಾದಿಸಿದರು. ತಮಿಳುನಾಡಿಗೆ ನೀರು ಹರಿಸದಂತೆ ಒತ್ತಾಯಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಸುತ್ತಿರುವ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿ, ನೂರು ವರ್ಷಗಳ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಇಂದು ನಡೆಯಲು ಸಾಧ್ಯವಿಲ್ಲ. ಅಂದು ಜನಸಂಖ್ಯೆ ಹೆಚ್ಚಿರಲಿಲ್ಲ. ಹೆಚ್ಚಾಗಿ ಕೃಷಿ ಜಮೀನೂ ಇರಲಿಲ್ಲ. ವಾಡಿಕೆಯಷ್ಟು ಮಳೆಯಾಗುತ್ತಿತ್ತು. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಇಂದು ಜನಸಂಖ್ಯೆ ಹೆಚ್ಚಿದೆ. ಕೃಷಿ ಭೂಮಿಯೂ ಹೆಚ್ಚಿದೆ. ವಾಡಿಕೆಯಷ್ಟು ಮಳೆಯಾಗುತ್ತಿಲ್ಲ. ಇವುಗಳನ್ನು ಕಾವೇರಿ ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರ, ಸುಪ್ರೀಂಕೋರ್ಟ್ ಏಕೆ ಪರಿಗಣಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಪ್ರಸ್ತುತ ಕಾಲಘಟಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸುವುದರ ಜೊತೆಗೆ ಬೆಂಗಳೂರು ಸೇರಿದಂತೆ ಎಂಟ್ಹತ್ತು ಜಿಲ್ಲೆಗಳ ಜನರ ಕುಡಿಯುವ ನೀರಿಗೂ ಆದ್ಯತೆ ನೀಡಿ ನೀರಿನ ಲಭ್ಯತೆ ಆಧಾರದ ಮೇಲೆ ಹಂಚಿಕೆ ಮಾಡಬೇಕು. ಹೆಚ್ಚು ಮಳೆ ಬಂದರೆ ಯಾವುದೇ ತೊಂದರೆ ಇಲ್ಲ. ಸಂಕಷ್ಟ ಪರಿಸ್ಥಿತಿಯಲ್ಲಿ ಏನು ಮಾಡಬೇಕು. ಯಾವ ರೀತಿ ಹಂಚಿಕೆ ಮಾಡಿಕೊಳ್ಳಬೇಕು ಎಂಬುದರ ಕುರಿತಂತೆ ಸಮಗ್ರ ವರದಿ ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕು ಎಂದರು. ಬಹಳಷ್ಟು ಸ್ಥಿರ ಸರ್ಕಾರಗಳು ರಾಜ್ಯವನ್ನು ಆಳಿವೆ. ಯಾರೂ ಸಹ ಕಾವೇರಿಯಂತಹ ಜ್ವಲಂತ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲಿಲ್ಲ. ಈಗಲಾದರೂ ಸಹ ಸಮಗ್ರವಾಗಿ ಅಧ್ಯಯನ ನಡೆಸಿ ವೈಜ್ಞಾನಿಕವಾಗಿ ವರದಿ ತಯಾರಿಸಿ ಎರಡೂ ರಾಜ್ಯಗಳು ಒಪ್ಪುವಂತಹ ನ್ಯಾಯವನ್ನು ಪಡೆಯಬೇಕು ಎಂದರು.