ಪಕ್ಷ ಸಂಘಟಿಸಿ ಬಲಪಡಿಸಿ: ಅಮರನಾಥ್ ಪಾಟೀಲ್

| Published : Jan 30 2025, 12:30 AM IST

ಸಾರಾಂಶ

ಪಕ್ಷವನ್ನು ಬಲಪಡಿಸುವ ಕೆಲಸ ಮಾಡಲಿ

ಹೊಸಪೇಟೆ: ರಾಜ್ಯದ ವರಿಷ್ಠರ ಸೂಚನೆ ಪ್ರಕಾರ ಸಮಾಲೋಚನೆ ಮಾಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ಸಂಜೀವ್ ರೆಡ್ಡಿ ಅವರನ್ನು ನೂತನ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ. ಪಕ್ಷವನ್ನು ಬಲಪಡಿಸುವ ಕೆಲಸ ಮಾಡಲಿ ಎಂದು ಮಾಜಿ ಎಂಎಲ್ಸಿ ಅಮರನಾಥ್ ಪಾಟೀಲ್ ಹೇಳಿದರು.ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಹೆಸರು ಘೋಷಿಸಿ ಮಾತನಾಡಿದರು.

ಪಕ್ಷದ ಆರಂಭದಲ್ಲಿ ನಮ್ಮ ಅಭ್ಯರ್ಥಿ ಸೋಲೋದು ಗ್ಯಾರಂಟಿ ಅನ್ನುವಂತಿತ್ತು. ಹಿರಿಯರ ಶ್ರಮದಿಂದ ಹಂತ ಹಂತವಾಗಿ ಪಕ್ಷ ಬೆಳೆಯುತ್ತಾ ಬಂದಿದೆ. ಪಕ್ಷದ ಕೆಲಸ ಜವಾಬ್ದಾರಿ ಬಂದಾಗ ಎಲ್ಲ ಕೆಲಸ ಬಿಟ್ಟು ಹೋಗುವುದು ಬಿಜೆಪಿಯವರು ಮಾತ್ರ. ವಿಜಯನಗರದಲ್ಲಿ ಶೇ.80ರಷ್ಟು ಬೂತ್ ಸಮಿತಿಗಳನ್ನು ಯಶಸ್ವಿಯಾಗಿದೆ. ಅಧ್ಯಕ್ಷರು ಸೇರಿದಂತೆ ಎಲ್ಲ ಸಮಿತಿಗಳನ್ನು ಬಹಳ ನಿಯಮಿತವಾಗಿ ರಚಿಸಲಾಗುತ್ತದೆ. ಈ ವ್ಯವಸ್ಥೆ ಬೇರೆ ಪಕ್ಷಗಳಲ್ಲಿ ಇಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರದಲ್ಲಿ ಹಾಡುಹಗಲೇ ಬ್ಯಾಂಕ್ ದರೋಡೆ, ಕೊಲೆ, ಸುಲಿಗೆ ನಡೆಯುತ್ತಿವೆ. ಹುಡಾ, ವಾಲ್ಮಿಕಿ ನಿಗಮದ ಹಗರಣ ಹೀಗೆ ಸಾವಿರಾರು ಕೋಟಿ ಹಗರಣಗಳನ್ನು ಮಾಡಿದೆ. ನಮ್ಮ ಶಕ್ತಿ, ಬಲವನ್ನು ವಿಸ್ತಾರ ಮಾಡುವ ಕೆಲಸ ಮಾಡಬೇಕು ಎಂದರು.

ನಿಕಟಪೂರ್ವ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಮಾತನಾಡಿ, ನೂತನ ಅಧ್ಯಕ್ಷರಿಗೆ ಎಲ್ಲ ಕಾರ್ಯಕರ್ತರು ಸಂಪೂರ್ಣ ಅವಕಾಶ ಕೊಡುವ ಮೂಲಕ ಪಕ್ಷ ಸಂಘಟನೆಗೆ ಸಹಕರಿಸಬೇಕು. ನಿರಂತರವಾಗಿ ಸಂಘಟನೆಯಲ್ಲಿ ತೊಡಗಿ ಕಳೆದ 9 ವರ್ಷಗಳಿಂದ ಸಹಕರಿಸಿದಂತೆ ನೂತನ ಜಿಲ್ಲಾಧ್ಯಕ್ಷರ ಜತೆಯಾಗಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸೋಣ ಎಂದರು.

ಅಖಂಡ ಬಳ್ಳಾರಿ ಜಿಲ್ಲೆಯ ಕೊನೆಯ ಮತ್ತು ನೂತನ ವಿಜಯನಗರ ಜಿಲ್ಲೆಯ ಮೊದಲ ಜಿಲ್ಲಾಧ್ಯಕ್ಷನಾಗಿ ಹಾಗೂ ಸತತ 8 ವರ್ಷಗಳಿಂದ ಕೆಲಸ ಮಾಡಿದ ಖುಷಿ ಇದೆ ಎಂದರು.

ಹೊಸಪೇಟೆ ಮಂಡಲದ ಪದಾಧಿಕಾರಿಗಳ ಅಭಿಪ್ರಾಯ ಕೇಳಿಲ್ಲ. ಆಕಾಂಕ್ಷಿಗಳು ಇರುತ್ತಾರೆ. ಕೆಲವರಿಗೆ ಮಾತ್ರ ವಿಷಯ ತಿಳಿಸಿ ಮಾಡಿದರೆ ಸರಿಯಲ್ಲ. ಮಂಡಲ ಅಧ್ಯಕ್ಷರ ಆಯ್ಕೆ ವೇಳೆಯೂ ನಮ್ಮನ್ನು ಕಡೆಗಣಿಸಲಾಗಿದೆ. ಯಾರೂ ಸಂಬಳಕ್ಕೆ ಬರುತ್ತಿಲ್ಲ. ಎಲ್ಲರಿಗೂ ಅವರವರ ಕೆಲಸ ಇರುತ್ತವೆ. ಮೊದಲೇ ಎಲ್ಲರಿಗೂ ತಿಳಿಸಿ ಮಾಡಬೇಕು ಎಂದು ಮಂಡಲ ಮಾಜಿ ಅಧ್ಯಕ್ಷ ಕಾಸೆಟ್ಟಿ ಉಮಾಪತಿ ಅಸಮಾಧಾನ ವ್ಯಕ್ತಪಡಿಸಿದರು.

ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಮಾತನಾಡಿದರು. ನಗರಸಭೆ ಅಧ್ಯಕ್ಷ ಎನ್.ರೂಪೇಶಕುಮಾರ್, ಉಪಾಧ್ಯಕ್ಷ ರಮೇಶ್ ಗುಪ್ತಾ, ನಂಜನಡಗೌಡ, ರಾಮಣ್ಣ ಬಲ್ಲಾಹುಣ್ಸಿ, ರಾಘವೇಂದ್ರ ಇದ್ದರು.

ಜಿಲ್ಲೆಯಲ್ಲಿ ಬಿಜೆಪಿಯ ಹಳೆ ವೈಭವ ತರುವ ನಿಟ್ಟಿನಲ್ಲಿ ಹುಮ್ಮಸ್ಸಿನಿಂದ ಶ್ರಮಿಸೋಣ. ಎಲ್ಲರಲ್ಲಿ ಬೆರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷವನ್ನು ಇವತ್ತಿಗಿಂತಲೂ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತೇನೆ ಎಂಬ ಭರವಸೆ ಇದೆ. ಜಿಪಂ, ತಾಪಂ, ಚುನಾವಣೆಗಳಲ್ಲಿ ಪಕ್ಷದ ಬಲವರ್ಧನೆಗೆ ಹುಮ್ಮಸ್ಸಿನಿಂದ ಪಕ್ಷ ಸಂಘಟನೆಗೆ ಶ್ರಮಿಸುತ್ತೇನೆ ಎನ್ನುತ್ತಾರೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವರೆಡ್ಡಿ.