ಸಾರಾಂಶ
ಬಿಜೆಪಿ ಹಿಂದಿನ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಈ ಅಭಿಯಾನ ಆರಂಭಿಸಿದಾಗ ವಿಪಕ್ಷಗಳು ಬಿಜೆಪಿ ಮಿಸ್ಡ್ ಕಾಲ್ ಪಕ್ಷ ಎಂದು ಲೇವಡಿ ಮಾಡಿದ್ದರು. ಇದೀಗ ಅದೇ ಪಕ್ಷವು ಮೂರನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರಕ್ಕೇರಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ವಿಪಕ್ಷಗಳಿಗೆ ಚಾಟಿ ಬೀಸಿದರು.
ಹುಬ್ಬಳ್ಳಿ:
ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಿಸ್ಡ್ ಕಾಲ್ ನೀಡುವ ಮೂಲಕ ಸೆ. 2ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಇಲ್ಲಿನ ಅರವಿಂದನಗರದ ಬಿಜೆಪಿ ಕಚೇರಿಯಲ್ಲಿ ಸೆಂಟ್ರಲ್ ಕ್ಷೇತ್ರದ ಪಕ್ಷದ ಸದಸ್ಯತ್ವ ಅಭಿಯಾನದ ಸಭೆಯಲ್ಲಿ ಸದಸ್ಯತ್ವ ಅಭಿಯಾನದ ಮಿಸ್ಡ್ ಕಾಲ್ ನಂಬರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಬಿಜೆಪಿಯು ತತ್ವ ಸಿದ್ಧಾಂತದ ಆಧಾರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂದೆ ರಾಷ್ಟ್ರೀಯ ಅಧ್ಯಕ್ಷರಾಗಿದ್ಧ ಅಮಿತ್ ಶಾ ಅವರು ಈ ಅಭಿಯಾನಕ್ಕೆ ಚಾಲನೆ ನೀಡಿದಾಗ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಪ್ರಸ್ತುತ ದೇಶದಲ್ಲಿ 18 ಕೋಟಿ ಬಿಜೆಪಿ ಸದಸ್ಯರಿದ್ದಾರೆ. ಆಗ ವಿಪಕ್ಷಗಳು ಬಿಜೆಪಿ ಮಿಸ್ಡ್ ಕಾಲ್ ಪಕ್ಷ ಎಂದು ಲೇವಡಿ ಮಾಡಿದ್ದರು. ಈಗ ಅದೇ ಮಿಸ್ಡ್ ಕಾಲ್ ಪಕ್ಷವು ದೇಶದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿ ಮಿತ್ರ ಪಕ್ಷಗಳೊಂದಿಗೆ ಅಧಿಕಾರದಲ್ಲಿದೆ ಎಂದು ವಿಪಕ್ಷಗಳ ಆಗಿನ ಟೀಕೆಗೆ ಉತ್ತರಿಸಿದರು.ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆದಿದೆ ಎಂದ ಶಾಸಕ, ಸದಸ್ಯತ್ವದ ಅಭಿಯಾನದ ಜತೆ ಜತೆಗೆ ಪಕ್ಷ ಸಂಘಟನೆಗೂ ಹೆಚ್ಚು ನೀಡಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಶಾಸಕರೊಬ್ಬರು ತಮ್ಮ ಪಕ್ಷದ 50 ಶಾಸಕರಿಗೆ ಆಮಿಷವೊಡ್ಡಿ ಬಿಜೆಪಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ಆಧಾರ ರಹಿತವಾಗಿ ನೀಡಿದ್ದ ಹೇಳಿಕೆ ವಿರುದ್ಧ ಈಗಾಗಲೇ ಆಯಾ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ನಿರ್ನಾಮವಾಗಲಿದೆ ಎಂದು ಭವಿಷ್ಯ ನುಡಿದರು.ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ರಾಜ್ಯದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರವು ಸಂಘಟನೆಯಲ್ಲಿ ಉತ್ತಮವಾಗಿದೆ. ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು. ಅಧ್ಯಕ್ಷತೆಯನ್ನು ಸಂತೋಷ ಚವ್ಹಾಣ ವಹಿಸಿದ್ದರು.
ಅಭಿಯಾನದ ಸಂಚಾಲಕ ನಾರಾಯಣ ಜರತಾರಗರ್. ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ಬೀರಪ್ಪ ಖಂಡೆಕರ್, ಮಲ್ಲಿಕಾರ್ಜುನ ಗುಂಡೂರ, ಉಮೇಶಗೌಡ ಕೌಜಗೇರಿ, ಎಂ.ವೈ. ನರಗುಂದ, ಚಂದ್ರಿಕಾ ಮೇಸ್ತ್ರಿ, ರೂಪಾ ಶೆಟ್ಟಿ, ಮೀನಾಕ್ಷಿ ಒoಟಮುರಿ, ಅಶೋಕ ವಾಲ್ಮೀಕಿ, ಜಿಲ್ಲಾ ಮಾಧ್ಯಮ ವಕ್ತಾರ ರವಿ ನಾಯಕ ಸೇರಿದಂತೆ ಹಲವರು ಇದ್ದರು.