ಸಾರಾಂಶ
ಕನ್ನಡಪ್ರಭ ವಾರ್ತೆ ಅಮಿನಗಡ
ಪಕ್ಷರಹಿತ, ಪೀಠ ರಹಿತವಾಗಿ ಸಮಾಜ ಕಟ್ಟುವ ಮೂಲಕ ಮಠಾಧೀಶರಿಗೂ, ಸಮಾಜದ ರಾಜಕಾರಣಿಗಳಿಗೂ ಪಾಠ ಕಲಿಸಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಅಧಿಕಾರಿ, ಕಸಾಪ ಮಾಜಿ ಅಧ್ಯಕ್ಷ ಶ್ರೀಶೈಲ ಕರಿಶಂಕರಿ ಹೇಳಿದರು.ಪಟ್ಟಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕ್ಷೇಮಾಭಿವೃದ್ಧಿ ಸಂಘ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಲಿಂಗಾಯತ ಪಂಚಮಸಾಲಿ ಸಮಾಜದ ಸಹಯೋಗದಲ್ಲಿ ವಿ.ಮ. ಬ್ಯಾಂಕಿಗೆ ಆಯ್ಕೆಯಾದ ನೂತನ ಸದಸ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಎಷ್ಟು ವರ್ಷ ಜಾತಿಯ ಕೊಂಬೆಯಲ್ಲಿ ಜೋತಾಡುತ್ತೀರಿ, ಸರ್ವ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರನ್ನೂ ಗೌರವದಿಂದ ಕಾಣುವ ಮೂಲಕ ನಮ್ಮ ಸಮಾಜವನ್ನು ಬೆಳೆಸಬೇಕು. ಪೀಠ ಹಾಗೂ ಪಕ್ಷಗಳಿಂದ ಹೊರಬಂದು ಸಮಾಜವನ್ನು ಸಂಘಟಿಸಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಸಮಸ್ಯೆಗೂ ಸ್ಪಂದಿಸಬೇಕು. ಎಲ್ಲರಿಗೂ ಅಧಿಕಾರ, ಸ್ಥಾನ ಸಿಗುವಂತೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.
ಸಮಾಜದ ಮೂರು ಪೀಠಾಧಿಪತಿಗಳಲ್ಲಿಯೇ ಒಮ್ಮತವಿಲ್ಲ. ಸಮಾಜದ ಕಾರ್ಯಕ್ರಮಗಳಿಗೆ ಒಬ್ಬರನ್ನು ಕರೆದರೆ ಮತ್ತೊಬ್ಬರು ಬರಲ್ಲ. ಇಂಥವರನ್ನು ನಂಬಿಕೊಂಡು ಸಮಾಜ ಕಟ್ಟಲು ಸಾಧ್ಯವೇ ? ಎಂದು ಪ್ರಶ್ನಿಸಿದ ಅವರು, ಸಮಾಜದ ಋಣ ತೀರಿಸಬೇಕಾದರೆ ಎಲ್ಲರೂ ಒಂದಾಗಿ ಸದೃಢ, ಸ್ವಾಭಿಮಾನದ ಸಮಾಜ ಕಟ್ಟೋಣ ಎಂದ ಅವರು, ಸಮಾಜದ ಹೆಸರಿನಲ್ಲಿ ಅಧಿಕಾರ, ಅಂತಸ್ತು ಪಡೆದ ದೊಡ್ಡವರು ತಮ್ಮ ಹಿಂದೆ ಇರುವವರಿಗೂ ಅವಕಾಶ ಕಲ್ಪಿಸಬೇಕು. ಪಂಚಮಸಾಲಿ ಸಮಾಜದಲ್ಲೂ ಆರ್ಥಿಕವಾಗಿ ಹಿಂದುಳಿದವರಿದ್ದಾರೆ. ಅವರನ್ನೂ ಸಬಲರನ್ನಾಗಿ ಮಾಡಲು ಶ್ರಮಿಸಬೇಕು.ಹುನಗುಂದ ವಿ.ಮ.ಬ್ಯಾಂಕಿಗೆ 6ನೇ ಬಾರಿ ಆಯ್ಕೆಯಾದ ನಿರ್ದೇಶಕ ಮಹಾಂತೇಶ ಆವಾರಿ ಮಾತನಾಡಿ, ಹುನಗುಂದ ವಿಜಯಮಹಾಂತೇಶ ಬ್ಯಾಂಕ್ ಹುಟ್ಟುಹಾಕಿದ ಹಿಂದಿನ ಹಿರಿಯರಿಗೆ, ಷೇರುದಾರರಿಗೆ, ನನಗೆ ಮತನೀಡಿ ಗೆಲ್ಲಿಸಿದ ಮತದಾರರಿಗೆ ಈ ಸನ್ಮಾನ ಸಲ್ಲುತ್ತದೆ. ಬ್ಯಾಂಕನ್ನು ಇನ್ನಚ್ಟು ಬೆಳೆಸಿ, ಸರ್ವರಿಗೂ ಅನುಕೂಲ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.
ವಿ.ಮ.ಬ್ಯಾಂಕ್ ನೂತನ ನಿರ್ದೇಶಕರಾದ ರಾಜಕುಮಾರ ಬಾದವಾಡಗಿ, ರವಿ ಹುಚನೂರ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಉಪನ್ಯಾಸಕ, ಸಮಾಜದ ಅಧ್ಯಕ್ಷ ಅಶೋಕ ಚಿಕ್ಕಗಡೆ ಮಾತನಾಡಿದರು.ಇದೇ ವೇಳೆ ವಿ.ಮ.ಬ್ಯಾಂಕಿಗೆ ಆಯ್ಕೆಯಾದ ಪಂಚಮಸಾಲಿ ಸಮಾಜದ ಶಕುಂತಲಾ ಎಸ್.ಗಂಜೀಹಾಳ, ಮಹಾಂತೇಶ ಆವಾರಿ, ರವಿ ಹುಚನೂರ ,ಶಿವಾನಂದ ಕಂಠಿ, ಬಸವರಾಜ ಹೊಸೂರ, ರಾಜಕುಮಾರ ಬಾದವಾಡಗಿ, ಶರಣಪ್ಪ ಹೊಸೂರ, ಬಸವರಾಜ(ರಾಜು) ನಾಡಗೌಡ, ಮುತ್ತಣ್ಣ ಕಲಗೋಡಿ, ಶಕುಂತಲಾ ಬೆಲ್ಲದ, ಮಹಾಂತೇಶ ಸುಂಕದ ಹಾಗೂ ಫ.ಗು.ಹಳಕಟ್ಟಿ ಪ್ರಶಸ್ತಿ ಪುರಸ್ಕೃತ ಅಶೋಕ ಹಿರೇಲಿಂಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್. ಗೋಲಪ್ಪನವರ ಪ್ರಾರ್ಥಿಸಿದರು. ಎಸ್.ಎಂ.ರಾಂಪುರ ಸ್ವಾಗತಿಸಿದರು. ಮಲ್ಲಿಕಾರ್ಜುನ ಸಜ್ಜನ ನಿರೂಪಿಸಿದರು. ಶಿವಲಿಂಗಪ್ಪ ಮುಳ್ಳೂರ ವಂದಿಸಿದರು.