ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ಕಾಂಗ್ರೆಸ್ ಪಕ್ಷದ ಮೂಲ ಬೇರಾಗಿರುವ ಯುವ ಸಮುದಾಯವನ್ನು ಸಂಘಟಿಸುವ ಕೆಲಸದಲ್ಲಿ ಸಮಿತಿಗಳು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ ಎಂದು ನಗರ ಘಟಕದ ಅಧ್ಯಕ್ಷ ಎಂ.ಮುಷೀರ್ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಅಸೆಂಬ್ಲಿ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ನಡೆದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವಾರ್ಡ್ ಗಳಲ್ಲಿ ಸಮಿತಿ ರಚನೆ ಮಾಡುವ ಮೂಲಕ ಅಧ್ಯಕ್ಷ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಮಾಡಬೇಕಿದೆ. ನಮ್ಮ ಪಕ್ಷದ ಶಾಸಕರು, ಆ ಭಾಗದ ಮುಖಂಡರ ಜೊತೆ ಚರ್ಚೆ ನಡೆಸಿ ಸಲಹೆ, ಮಾರ್ಗದರ್ಶನ ಪಡೆದು ಸಮಿತಿ ರಚನೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ಯುವ ಕಾಂಗ್ರೆಸ್ ಗೆ ತನ್ನದೇ ಆದ ಪ್ರಮುಖ ಜವಾಬ್ದಾರಿಯಿದೆ. ಅದನ್ನರಿತು ಪಕ್ಷದ ಆಂತರಿಕ ಚುನಾವಣೆ ಮುಗಿದಿದ್ದು, ಜಿಲ್ಲಾಧ್ಯಕ್ಷ ಚಂದ್ರಸಾಗರ್ ಅವರ ಮಾರ್ಗದರ್ಶನದಲ್ಲಿ ಪಕ್ಷದ ಸಿದ್ದಾಂತಗಳನ್ನು ಒಪ್ಪುವ ಕ್ರಿಯಾಶೀಲ ಯುವಕರಿಗೆ ಸಂಘಟನೆಯ ಜವಬ್ದಾರಿ ನೀಡಲು ತೀರ್ಮಾನಿಸಿರು ವುದಾಗಿ ತಿಳಿಸಿದರು.ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ, ಯುವಕರನ್ನು ಸಂಘಟಿಸಿ ಪಕ್ಷದ ಬಲವರ್ದನೆ ಮಾಡುವುದಷ್ಟೆ ಅಲ್ಲದೆ ಯುವಕರ ಆರೋಗ್ಯ ಕಾಳಜಿಯನ್ನು ಸಹ ಕಾಂಗ್ರೆಸ್ ಪಕ್ಷ ಹೊಂದಿದ್ದು, ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ಉಚಿತ ಹೃದಯ ತಪಾಸಣೆಯಂತಹ ಜನಪರ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದರು.
ಯುವ ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಹಪ್ನಾನ್ ಖಾನಂ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ಬೂತ್ ಮತ್ತು ವಾರ್ಡ್ ಮಟ್ಟದಲ್ಲಿ ಯುವ ಕಾಂಗ್ರೆಸ್ ಸಮಿತಿಯ ರಚನೆ ಮಾಡುವ ಮೂಲಕ ಬೇರು ಮಟ್ಟದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡಿ ಸಂಘಟನೆ ಬಲಗೊಳಿಸುವ ಅಗತ್ಯವಿದ್ದು, ಶೀಘ್ರವಾಗಿ ಸಮಿತಿಗಳ ರಚನೆಗೆ ಚಾಲನೆ ನೀಡಬೇಕಿದೆ. ಜೊತೆಗೆ ಸಮಿತಿಯ ಜವಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ತಿಳಿಸುವ ಕೆಲಸ ಮಾಡಿ, ಎಲ್ಲ ಸಮಿತಿಗಳ ಅಧ್ಯಕ್ಷರು, ಸದಸ್ಯರ ನ್ನೊಳಗೊಂಡ ವಾಟ್ಸಪ್ ಗ್ರೂಪ್ ರಚಿಸಿ, ಕಾರ್ಯಕ್ರಮಗಳ ಬಗ್ಗೆ ಸಮಿತಿಯ ಸಂಘಟನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಿ ಎಂದು ಕಿವಿಮಾತು ಹೇಳಿದರು.ಸಭೆಯಲ್ಲಿ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಭೂಷಣ್, ಯುವ ಕಾಂಗ್ರೆಸ್ ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಅರ್ಪಿತಾ, ಜಿಲ್ಲಾ ಕಾರ್ಯದರ್ಶಿ ಚೇತನ್, ತಾಲೂಕು ಪ್ರಧಾನ ಕಾರ್ಯದರ್ಶಿ ನಾಜಿಯಾ, ಗ್ರಾಮಾಂತರ ಬ್ಲಾಕ್ ಉಪಾಧ್ಯಕ್ಷರಾದ ಯೋಗೇಶ್, ದುರ್ಗಪ್ರಸಾದ್ ಉಪಸ್ಥಿತರಿದ್ದರು.