ಸಾರಾಂಶ
ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಮುಂದಿನ ದಸರಾ ವೇಳೆ ವಿಶ್ವ ಕಾವ್ಯ ಸಮ್ಮೇಳನ ಆಯೋಜಿಸುವಂತೆ ಕವಿ ಡಾ.ಎಚ್.ಎಸ್. ಶಿವಪ್ರಸಾದ್ ಸಲಹೆ ನೀಡಿದರು.ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ದಸರಾ ಕವಿಗೋಷ್ಠಿ ಉಪ ಸಮಿತಿ ವತಿಯಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಮಂಗಳವಾರ ಆಯೋಜಿಸಿದ್ದ ಸಮಷ್ಟಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಸಮಷ್ಟಿ ಕವಿಗೋಷ್ಠಿ ಈ ವರ್ಷ ಹೊಸ ವೈಶಿಷ್ಟ್ಯವಾಗಿದ್ದು, ಭಾವೈಕ್ಯತೆಯ ಸಾಮರಸ್ಯ ಕಲ್ಪಿಸುವ ವೇದಿಕೆಯಾಗಿದೆ. ನಾಗಚಂದ್ರ ಕವಿತೆ ಎಂದರೆ ಸರ್ವ ಭಾಷಾ ಸರಸ್ವತಿ ಎಂದಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಇದು ಇದೆ. ಕವಿತೆಯ ನವಿರುಭಾವ ಕಟ್ಟಿಕೊಟ್ಟಿದೆ. ನಮ್ಮ ಪ್ರಾದೇಶಿಕ ಭಾಷೆಗಳಲ್ಲೂ ಸಾಕಷ್ಟು ಕವಿಗಳಿದ್ದಾರೆ. 22 ಭಾಷೆ ಅಲ್ಲದೆ ಇತರ ಭಾಷೆಗಳು ಇವೆ. ಬುಡಕಟ್ಟು ಭಾಷೆಯಲ್ಲೂ ಕವಿತೆ ರಚನೆ ಆಗಿದೆ. ಅನುವಾದ ಕಾವ್ಯಗಳೂ ಇಂದು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದರು.ಈ ಬಾರಿ ಪ್ರಪ್ರಥಮವಾಗಿ ಸಮಷ್ಟಿ ಬಹುಭಾಷಾ ಕವಿಗೋಷ್ಠಿ ಆಯೋಜಿಸಿರುವುದು ಬಹಳ ಸಂತೋಷ. ಕಾವ್ಯಕ್ಕೆ ಭಾಷೆ ಒಂದು ಮಾಧ್ಯಮವಷ್ಟೆ. ಸಂವೇದನೆ ಎಂಬುದು ಎಲ್ಲಾ ಭಾಷೆಗಳಲ್ಲಿಯೂ ಸಮಾನ. ಬಹುಭಾಷೆಯ ಈ ಸಮ್ಮಿಲನ ಉದ್ಯಾನವನದಲ್ಲಿ ಅಲಂಕರಿಸಿದ ಬಗೆ ಬಗೆಯ ಹೂಗಳಿದ್ದಂತೆ ಎಂದು ಅವರು ವರ್ಣಿಸಿದರು.ಪ್ರಸ್ತುತ ದಿನಗಳಲ್ಲಿ ಭಾಷೆ ಮತ್ತು ಭಾವೈಕ್ಯತೆಯ ಸಾಮರಸ್ಯ ಅಗತ್ಯವಿದ್ದು, ಇಂತಹ ಕಾರ್ಯಕ್ರಮಗಳಿಂದ ಸಾಮರಸ್ಯ ಸಾಧಿಸಬಹುದು. ಇಷ್ಟು ವರ್ಷದಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ಈ ವರ್ಷದ ಸಮಷ್ಟಿ ಕವಿಗೋಷ್ಠಿ ಮಾದರಿಯಾಗಿದೆ. ಮುಂಬರುವ ದಸರಾ ಕವಿಗೋಷ್ಠಿಗೆ ಮೈಸೂರಿನಲ್ಲಿ ವಿಶ್ವ ಕಾವ್ಯ ಸಮ್ಮೇಳನ ಆಯೋಜಿಸುವಂತೆ ಅವರು ಸಲಹೆ ನೀಡಿದರು.ಕವಿಗೋಷ್ಠಿಯಲ್ಲಿ ಅಕ್ಷತಾರಾಜ್ ಪೆರ್ಲ ಅವರು ತುಳು ಭಾಷೆಯಲ್ಲಿ ಸಂಭವಾಮಿ ಕವಿತೆ ವಾಚಿಸಿದರು. ಸುತ್ತಿದ ಒಂದು ತುಂಡಿನ ನಡುವೆ ಅವಿತುಕೊಳ್ಳುವಳು ಆಮೆಯಂತೆ, ಇರುವ ಎರಡು ಸೀರೆ, ಮಡಿಗೊಳಿಸಲು ಅವಕ್ಕೆ ಸಾವಿರಾರು ತೂತು, ಈಗೊಬ್ಬ ಕೃಷ್ಣ ಸೀರೆ ನೀಡಲಿ ಎಂಬರ್ಥದ ಕವಿತೆಯು ಮೆಚ್ಚುಗೆ ಗಳಿಸಿತು. ಕವಿಗಳಾದ ಇಂದಿರನ್ ರಾಜೇಂದ್ರನ್ ಅವರು ತಮಿಳಿನಲ್ಲಿ ಹೆಂಡತಿಗೊಂದು ಪ್ರೇಮಪತ್ರ ಎಂಬ ಕವನ ವಾಚಿಸುತ್ತ, ನೀನು ಎನ್ನ ಪ್ರಾಣವಾಯು, ನಾನು ನಿನ್ನ ಇಂಗಾಲಾಮ್ಲ, ತಂದೆ ತಾಯಿ ಇಲ್ಲದ ಇಬ್ಬರೂ ಅನಾಥ ಮಕ್ಕಳು ಎನ್ನುವ ಮೂಲಕ ಪತ್ನಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ತಮಿಳ್ಸೆಲ್ವಿ ಕನ್ನಡಾನುವಾದ ಮಾಡಿದರು.ಡಾ. ಋಷಿಕೇಶ್ ಅವರು ಒಡಿಯಾ ಭಾಷೆಯಲ್ಲಿ ''''ವಿಸರ್ಜನೆ'''' ಎಂಬ ಕಾವ್ಯ ವಾಚನವನ್ನು, ಆಂಗ್ಲ ಭಾಷೆಯಲ್ಲಿ ಕನಸು, ನಾಗತಿಹಳ್ಳಿ ಅವರು ತನ್ನ 6 ವರ್ಷದ ಮಗಳ ಕುರಿತು ''''ಲೀಲಾ-ಜಾಲ'''' ಶೀರ್ಷಿಕೆಯಡಿ ಕವನವನ್ನು ಪ್ರಸ್ತುತಪಡಿಸಿದರು.ಎಂ.ಆರ್. ಕಮಲಾ ಅವರು ಕನ್ನಡ ಭಾಷೆಯಲ್ಲಿ ನನ್ನದೇ ನಿಘಂಟು ಎಂಬ ಕಾವ್ಯ ವಾಚನವನ್ನು, ಎನ್. ಕಿರಣ್ ಕುಮಾರ್ ಎನ್. ಅವರು ಮಣಿಪುರಿ ಭಾಷೆಯಲ್ಲಿ ''''ಸ್ನೇಹಿತನಿಗೆ ಒಂದು ಪತ್ರ'''' ಎಂಬ ಕಾವ್ಯ ವಾಚನ, ಜೊಸ್ಸಿ ಎಡ್ವಿನ್ ಪಿಂಟೋ ಅವರು ಕೊಂಕಣಿ ಭಾಷೆಯಲ್ಲಿ ''''ನನ್ನೂರು'''' ಎಂಬ ಕಾವ್ಯ ವಾಚನವನ್ನು, ಡಾ. ದೀಪಕ್ ಭಟ್ ಅವರು ಸಂಸ್ಕೃತ ಭಾಷೆಯಲ್ಲಿ ಮೈಸೂರಿನ ಕುರಿತು ಸ್ವಾಗತ ಗೀತೆಯನ್ನು, ಡಾ. ನೀಲಿಮಾ ಗುಂಡಿ ಅವರು ಮರಾಠಿ ಭಾಷೆಯಲ್ಲಿ ''''ಓ ಭೂಮಿ'''' ಎಂಬ ಶೀರ್ಷಿಕೆಯ ಕಾವ್ಯ ವಾಚನವನ್ನು, ಮನಮೋಹನ್ ಸಿಂಗ್ ಅವರು ಡೋಗ್ರಿ ಭಾಷೆಯಲ್ಲಿ ''''ನನ್ನ ಹುಡುಗಿಯೇ ಕೇಳು'''' ಎಂಬ ಕವಿತೆಯನ್ನು, ಹಾಗೂ ಮಧುಸ್ ಪೂವಯ್ಯ ಅವರು ಕೊಡವ ಭಾಷೆಯ ''''ವರವ ಪ್ರಿಯ'''' ಎಂಬ ವಾಚನ, ಸೇರಿದಂತೆ 15 ಕ್ಕೂ ಹೆಚ್ಚು ಬಹುಭಾಷ ಕವಿಗಳು ಕವನವನ್ನು ಪ್ರಸ್ತುತ ಪಡಿಸಿದರು.ಮುಖ್ಯ ಅತಿಥಿಯಾಗಿದ್ದ ಜ.ನಾ. ತೇಜಶ್ರೀ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತೊಡಕು ಉಂಟಾಗುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹೆಚ್ಚಾಗುತ್ತಿದೆ.ಯಾವ ಭಾಷೆ ನಮ್ಮ ಮನಸ್ಸುಗಳನ್ನು ಬೆಸೆಯಬೇಕಾಯಿತೋ ಅದೇ ಭಾಷೆ ನಮ್ಮ ಮನಸ್ಸಿನ ಸುತ್ತ ಗೋಡೆಗಳನ್ನು ನಿರ್ಮಿಸಿದೆ. ಇದು ಈ ಕಾಲದ ದುರಂತ. ಎಲ್ಲಿ ಭಾಷೆ ಕೆಡುತ್ತದೋ ಅಲ್ಲಿ ಬದುಕು ಕೆಡುತ್ತದೆ ಎಂದರು.ಮುಖ್ಯಮಂತ್ರಿಗಳ ಕಾರ್ಯದರ್ಶಿ ಶಿವಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ. ಜೆ. ವಿಜಯ್ ಕುಮಾರ್, ಕವಿಗೋಷ್ಠಿ ಉಪ ಸಮಿತಿ ಕಾರ್ಯಾಧ್ಯಕ್ಷೆ ಪ್ರೊ.ಎನ್.ಕೆ. ಲೋಲಾಕ್ಷಿ, ಉಪ ವಿಶೇಷಾಧಿಕಾರಿ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಕಾರ್ಯದರ್ಶಿ ಸಿ.ಕೃಷ್ಣ, ಅಧಿಕಾರೇತರ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತಿತರರು ಇದ್ದರು.ಸಮಷ್ಟಿ ಕವಿಗೋಷ್ಠಿ ಮೊದಲ ಪ್ರಯೋಗ:
ಅಧ್ಯಕ್ಷತೆ ವಹಿಸಿದ್ದ ಮಹಾರಾಣಿ ಕ್ಲಸ್ಟರ್ ವಿಶ್ವ ವಿದ್ಯಾನಿಲಯದ ಪ್ರಾಧ್ಯಾಪಕ. ಕೆ. ವೈ. ನಾರಾಯಣಸ್ವಾಮಿ ಮಾತನಾಡಿ, ಸಮಷ್ಟಿ ಕವಿಗೋಷ್ಠಿಯು ದಸರಾ ಕವಿಗೋಷ್ಠಿಯ ಮೊದಲ ಪ್ರಯೋಗವಾಗಿದೆ. ಇದು ಸಮಾಜಕ್ಕೆ ಒಂದು ಬಳುವಳಿಯಾಗಿ ಮುಂದಿನ ಪೀಳಿಗೆಯೂ ಇದನ್ನು ಬೆಳೆಸಬೇಕು. ಕವಿತೆಯನ್ನು ಪ್ರೀತಿಸುವ ವಾತಾವರಣವನ್ನು ನಿರ್ಮಿಸುವ ಕೆಲಸವಾಗಬೇಕು ಎಂದು ಹೇಳಿದರು.ಅಂತಾರಾಳದಿಂದ ಅಭಿವ್ಯಕ್ತಿಸುವುದಕ್ಕೆ ಭಾಷೆ ಯಾವುದಾದರೇನು ವ್ಯಕ್ತ ಪಡಿಸುವ ಭಾವ ಒಂದೇ ಆಗಿರುತ್ತದೆ. ಸಾಕಷ್ಟು ಕವಿಗಳು ಬರುತ್ತಾರೆ ಹೋಗುತ್ತಾರೆ ಆದರೆ ಅವರ ಕವಿತೆಗಳು ಶಾಶ್ವತವಾಗಿ ಉಳಿಯುತ್ತವೆ. ಸರ್ವ ಭಾಷೆಗಳಲ್ಲಿ ಕವಿತೆಗಳು ರಚನೆಯಾಗಿ ಹೊಸ ತಲೆಮಾರುಗಳನ್ನು ಎಚ್ಚರಿಸುವಂತೆ ಮಾಡುವಂತಹ ಕವಿತೆಗಳು ಇನ್ನೂ ಹೆಚ್ಚು ಮೂಡಿ ಬರಲಿ ಎಂದು ಆಶಯವನ್ನು ವ್ಯಕ್ತಪಡಿಸಿದರು.