5- 6 ರಂದು ಮೈಸೂರು ಸಾಹಿತ್ಯ ಸಂಭ್ರಮ

| Published : Jul 02 2025, 11:49 PM IST

ಸಾರಾಂಶ

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತ್ಯೇಕವಾಗಿ ಸಾಹಿತ್ಯಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಮತ್ತು ಮೈಸೂರು ಬುಕ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಜು.5 ಮತ್ತು 6 ರಂದು ನಗರದ ಹೊಟೇಲ್ ಸದರ್ನ್ ಸ್ಟಾರ್‌ ನಲ್ಲಿ ಮೈಸೂರು ಸಾಹಿತ್ಯ ಸಂಭ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ತಿಳಿಸಿದರು.

ಈ ಸಾಹಿತ್ಯ ಉತ್ಸವವನ್ನು ಜು.5ರ ಬೆಳಗ್ಗೆ 10.30ಕ್ಕೆ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಉದ್ಘಾಟಿಸುವರು.

ಡಿಆರ್‌ ಡಿಒ ನಿವೃತ್ತ ವಿಜ್ಞಾನಿ ಪ್ರಹ್ಲಾದ ರಾಮರಾವ್, ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಶ್ತಾಕ್ ಮತ್ತು ದೀಪಾ ಭಾಸ್ತಿ ಮುಖ್ಯ ಅತಿಥಿಗಳಾಗುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರತ್ಯೇಕವಾಗಿ ಸಾಹಿತ್ಯಕ ಕಾರ್ಯಕ್ರಮ ನಡೆಯಲಿವೆ. ಆಸಕ್ತರು ತಮಗೆ ಬೇಕಾದ ಭಾಷೆ ಇರುವ ಸಭಾಂಗಣದಲ್ಲಿ ಕುಳಿತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರಾದ ಮಲ್ಲಿಕ್ ಸೇರಿದಂತೆ 104 ಮಂದಿ ಬರಹಗಾರರು, 28 ಮಂದಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಅವರು ವಿವರಿಸಿದರು.

ಟ್ರಸ್ಟ್ ಕಾರ್ಯದರ್ಶಿ ತಂಗಂ ಪಣಕಲ್, ಸ್ಯಾಂ ಚೆರಿಯನ್, ಕಿಟ್ಟಿ ಮಂದಣ್ಣ ಮೊದಲಾದವರು ಇದ್ದರು.