ಸಾರಾಂಶ
ವ್ಯಾವಹಾರಿಕ ಜ್ಞಾನವನ್ನು ವಿದ್ಯಾರ್ಥಿಗಳು ಈಗಿನಿಂದಲೇ ವೃದ್ಧಿಸಿಕೊಳ್ಳಬೇಕು. ಹಾಗಾಗಿ ನಮ್ಮ ಶಾಲಾ ಆವರಣದಲ್ಲಿ ಕ್ಯಾಂಟೀನ್ ಡೇ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಶಾಲಾ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ಹೇಳಿದರು.
ಕನ್ನಡಪ್ರಭ ವಾರ್ತೆ ಅರೇಹಳ್ಳಿ
ವ್ಯಾವಹಾರಿಕ ಜ್ಞಾನವನ್ನು ವಿದ್ಯಾರ್ಥಿಗಳು ಈಗಿನಿಂದಲೇ ವೃದ್ಧಿಸಿಕೊಳ್ಳಬೇಕು. ಹಾಗಾಗಿ ನಮ್ಮ ಶಾಲಾ ಆವರಣದಲ್ಲಿ ಕ್ಯಾಂಟೀನ್ ಡೇ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಶಾಲಾ ಕಾರ್ಯದರ್ಶಿ ಮುಜೀಬುರ್ ರೆಹಮಾನ್ ಹೇಳಿದರು.ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹಿರಾ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ ಮಾಡಲಾಗಿದ್ದ ಆಹಾರ ಮೇಳವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ವ್ಯಾವಹಾರಿಕ ಜ್ಞಾನದ ಸಂಪತ್ತನ್ನು ಗಳಿಸಲು ಪ್ರಯತ್ನಿಸಬೇಕು. ಇದರ ಮೂಲಕ ಲಾಭ ಮತ್ತು ನಷ್ಟವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳು ತಮಗಿಷ್ಟವಾದ ಸಿಹಿ ತಿನಿಸುಗಳನ್ನು ಮಾರಾಟ ಮಾಡುವುದರ ಮುಖಾಂತರ ಸುಲಭವಾಗಿ ಆದಾಯ ನಷ್ಟವನ್ನು ಲೆಕ್ಕಹಾಕಲು ಪ್ರಯತ್ನಿಸುತ್ತಾರೆ ಎಂದರು.
ಏಳನೇ ತರಗತಿಯ ವಿದ್ಯಾರ್ಥಿನಿ ಮಿಸ್ಬಾ ಫಾತಿಮಾ ಮಾತನಾಡಿ, ನಮ್ಮ ಶಾಲೆಯಲ್ಲಿ ಆಹಾರ ಮೇಳವನ್ನು ಆಯೋಜನೆ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ನನಗೆ ಈ ಆಹಾರ ಮೇಳದಲ್ಲಿ ಭಾಗವಹಿಸಲು ನಮ್ಮ ತಂದೆ - ತಾಯಿ, ನೆರೆ - ಹೊರೆಯವರು ಹಾಗೂ ಶಿಕ್ಷಕರು ನೆರವಾಗಿದ್ದಾರೆ. ಕ್ಯಾಂಟೀನ್ ಡೇ ಮೂಲಕ ನಾವು ಮನೆಯಿಂದ ತಯಾರಿಸಲಾದ ವಸ್ತುಗಳನ್ನು ಮಾರಾಟ ಮಾಡಿ ಲಾಭ ನಷ್ಟದ ಬಗ್ಗೆ ತಿಳಿದುಕೊಳ್ಳಲು ಸಹಾಯಕವಾಗಿದೆ. ಇದರ ಮೂಲಕ ಕಲಿಕೆಯ ಜೊತೆಗೆ ಲಾಭ - ನಷ್ಟದ ಅರಿವು ಸಹ ನಮಗೆ ಉಂಟಾಗುತ್ತದೆ ಎಂದರು.ಶಾಲಾ ವ್ಯವಸ್ಥಾಪಕ ಜುಬೇರ್ ಅಹ್ಮದ್, ಮುಖ್ಯ ಶಿಕ್ಷಕಿ ತಬಸ್ಸುಮ್ ಬಾನು, ಅಧ್ಯಕ್ಷ ಹಿಝಾರ್ ಅಸರ್ ಉಮ್ರಿ, ಶಿಕ್ಷಕಿಯರು ಹಾಗೂ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು.