ಸಾರಾಂಶ
ರಾಜ್ಯದಲ್ಲಿ ನಮ್ಮ ಸಂವಿಧಾನಬದ್ಧವಾಗಿ ಪರಿಶಿಷ್ಟ ಪಂಗಡ(ಎಸ್‌ಟಿ) ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳು ಸಮರ್ಪಕವಾಗಿ ಸಿಗುತ್ತಿಲ್ಲ.
ಬ್ಯಾಡಗಿ: ಪರಿಶಿಷ್ಟ ಪಂಗಡದ ಹಕ್ಕುಗಳನ್ನು ಸಂಘಟಿತರಾಗಿ ಹೋರಾಟ ಮಾಡಿ ಮರಳಿ ಪಡೆಯುವುದು ಅನಿವಾರ್ಯ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಹಕ್ಕುಗಳ ಸಂರಕ್ಷಣಾ ವೇದಿಕೆಯ ಸಂಚಾಲಕ ಹಾಗೂ ವಕೀಲ ಬಸವರಾಜ ಹಾದಿಮನಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಹಕ್ಕುಗಳ ಸಂರಕ್ಷಣಾ ವೇದಿಕೆಯ ಸಭೆಯಲ್ಲಿ ಮಾತನಾಡಿದರು.ರಾಜ್ಯದಲ್ಲಿ ನಮ್ಮ ಸಂವಿಧಾನಬದ್ಧವಾಗಿ ಪರಿಶಿಷ್ಟ ಪಂಗಡ(ಎಸ್‌ಟಿ) ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳು ಸಮರ್ಪಕವಾಗಿ ಸಿಗುತ್ತಿಲ್ಲ. ನಮ್ಮ ಹಕ್ಕುಗಳನ್ನು ಬೇರೆ ಸಮುದಾಯವರು ಕಬಳಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೆ ಸಿಗಬೇಕಾಗಿದ್ದ ಅನುದಾನ ದುರ್ಬಳಕೆ ಆಗುತ್ತಿದೆ. ಇದಕ್ಕೆ ಹಲವು ನಿದರ್ಶನಗಳು ಕಣ್ಣ ಮುಂದಿದೆ. ಇದಕ್ಕೆ ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ ಎಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮುದಾಯದ ಚಿಂತನೆಯುಳ್ಳ ಸಮಾನ ಮನಸ್ಕರ ಸಭೆ ಕರೆದು ನಿಷ್ಪಕ್ಷಪಾತ ಮತ್ತು ಪ್ರಾಮಾಣಿಕ ಸಮಾಜದ ಹೋರಾಟ ಮಾಡಲು ಯುವಕರನ್ನು ಸಜ್ಜು ಮಾಡಬೇಕಾಗಿದೆ. ನಾವು ಸುಮ್ಮನಾದರೆ ನಮ್ಮ ಹಕ್ಕುಗಳು ಬೇರೆಯವರ ಪಾಲಾಗುವ ಸಮಯ ದೂರವಿಲ್ಲ. ನಮ್ಮ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳಿಗೆ ಧಕ್ಕೆಯಾದಾಗ ತಾವು ಪಕ್ಷಾತೀತವಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.ರಾಜ್ಯ ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದೀವಿಗೆಹಳ್ಳಿ ಮಾತನಾಡಿ, ವಿವಿಧ ಇಲಾಖೆಗಳಲ್ಲಿ ನಮ್ಮ ಸಮುದಾಯಕ್ಕೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವುದು ಅತಿ ಅವಶ್ಯವಿದೆ. ಕಾರಣದಿಂದ ಯುವಕರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಪಡೆಯಲು ಮುಂದೆ ಬರಬೇಕು ಎಂದರು.
ಕರಿಯಪ್ಪ ಕ್ವಾಗಳ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಡಾ. ಬಿ.ಎಚ್. ದೊಡ್ಡರಾಮಣ್ಣ ಮಾತನಾಡಿದರು. ಹನುಮಂತಪ್ಪ ಚಳಗೇರಿ, ಬಸವರಾಜ ಹೊನ್ನಪ್ಪನವರ, ಬಸವರಾಜ ಹಂಚಿನಮನಿ, ದುರ್ಗಪ್ಪ ಹೊಸಮನಿ, ಪರಮೇಶ ಜಡತಲಿ, ಹೊನ್ನಪ್ಪ ಹಳ್ಳಿ, ಪ್ರವೀಣ ಅಗಸಿಬಾಗಿಲು, ಸತೀಶಕುಮಾರ ಬಡಮಲ್ಲಿ, ಪ್ರಭು ದೀವಿಗಿಹಳ್ಳಿ ಇನ್ನಿತರರಿದ್ದರು. ಹರೀಶಕುಮಾರ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಮುಗದೂರ ವಂದಿಸಿದರು.