ಕನ್ನಡಪರ ಸಂಘಟನೆಗಳು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಬೇಕು.

ಹಗರಿಬೊಮ್ಮನಹಳ್ಳಿ: ಕನ್ನಡಿಗರ ಹಿತಾಸಕ್ತಿಗೆ ಧಕ್ಕೆ ಉಂಟಾದಲ್ಲಿ ಶಾಂತಿಯುತ ಹಾಗೂ ಕಾನೂನುಬದ್ಧ ರೀತಿಯಲ್ಲಿ ಹೋರಾಟ ನಡೆಸಬೇಕು ಎಂದು ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ರಾಜು ಗುಜ್ಜಲ್ ಪ್ರತಿಪಾದಿಸಿದರು.

ಪಟ್ಟಣದ ವಾಲ್ಮೀಕಿ ನೌಕರರ ಭವನದಲ್ಲಿ ನಡೆದ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ನೂತನ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪರ ಸಂಘಟನೆಗಳು ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಸಾರ್ವಜನಿಕರಲ್ಲಿ ಕನ್ನಡಾಭಿಮಾನ ಬೆಳೆಸುವುದು ಸಂಘಟನೆಯ ಪ್ರಮುಖ ಕರ್ತವ್ಯವಾಗಬೇಕು, ತಾಲೂಕಿನಲ್ಲಿ ಸಂಘಟನೆ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿ ಗ್ರಾಮ ಹಾಗೂ ಸ್ಥಳೀಯ ಮಟ್ಟದಲ್ಲಿ ಸಂಘಟನೆ ವಿಸ್ತರಿಸಬೇಕು ಎಂದು ವಿವರಿಸಿದರು.

ನೂತನ ತಾಲೂಕು ಘಟಕದ ಅಧ್ಯಕ್ಷ ಡಿ. ಭೀಮರಾಜ ನಾಯಕ ಮಾತನಾಡಿ, ಕನ್ನಡವೆಂದರೆ ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಸಂಸ್ಕೃತಿ ಹಾಗೂ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕನ್ನಡ ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ.ಸಂಘಟನೆಯ ಪದಾಧಿಕಾರಿಗಳು ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಂಘಟನೆ ಇನ್ನಷ್ಟು ಪರಿಣಾಮಕಾರಿಯಾಗಿ ನಾವೆಲ್ಲರೂ ಕಟ್ಟೋಣ ಎಂದು ಆಶಿಸಿದರು.

ಸಂಘಟನೆಯ ಗೌರವಾಧ್ಯಕ್ಷ ಚಿಂತ್ರಪಳ್ಳಿ ದೇವೇಂದ್ರಪ್ಪ ಹಾಗೂ ಡಿ.ಅಂಜಿನಪ್ಪ. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕಾನೂನು ಸಲಹೆಗಾರ ತಿಮ್ಮಣ್ಣ ತಳವಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಾಗೂ ಜವಾಬ್ದಾರಿ ವಹಿಸಲಾಯಿತು.

ಇದೇ ಸಂದರ್ಭದಲ್ಲಿ ಸಂಘಟನೆಯ ಉತ್ತರ ಕರ್ನಾಟಕ ಉಪಾಧ್ಯಕ್ಷ ಬಿಎಂಎಸ್. ಕಿರಣ್ ಕಟಿಗಿ, ಉ.ಕ.ಯುವ ಘಟಕದ ಅಧ್ಯಕ್ಷ ಬಿಎಂಎಸ್.ಮಂಜುನಾಥ್, ಸಂಘಟನಾ ಕಾರ್ಯದರ್ಶಿ ನಾಗರಾಜ್ ನಾಯಕ್, ಸಂಚಾಲಕ ಮಂಜುನಾಥ್.ಕೆ., ತಾಲೂಕು ಉಪಾಧ್ಯಕ್ಷ ಸ್ವಾಮಿ, ಎ.ಎಚ್. ಸಂಘಟನಾ ಕಾರ್ಯದರ್ಶಿ ಡಿ.ಶಿವರಾಜ್, ಟಿ.ಸೋಮಶೇಖರ್, ಪಂಪಾಪತಿ. ಬಿ.ಅಭಿಷೇಕ್. ರಾಕೇಶ್ ಎಸ್. ಪಿ. ಸಂಪತ್ ಕುಮಾರ್, ಜೆ.ಆರ್. ಕಿರಣ್ ಕುಮಾರ್, ಎಂ.ಮಧು, ಹರೀಶ್, ಎಂ.ಶಿವರಾಜ್. ಅಬ್ದುಲ್ ಸಾಬ್,ರಾಜೇಂದ್ರ. ಕೆ.ಮಾರುತಿ, ರಾಘವೇಂದ್ರ, ಅಮರ್ , ಗೌತಮ್ , ಚಂದ್ರಕುಮಾರ್, ಪ್ರಕಾಶ್ , ನವೀನ್ ಹಾಗೂ ಇತರರಿದ್ದರು.