ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸರ್ಕಾರದ ಸೌಲಭ್ಯ ಪಡೆಯಲು ಸಣ್ಣ ಪುಟ್ಟ ಸಮುದಾಯಗಳು ಸಂಘಟಿತ ಹೋರಾಟ ಮಾಡಬೇಕಿದೆ ಎಂದು ನಗರದ ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ಜಿಲ್ಲಾ ಸವಿತಾ ಸಮಾಜ, ತಾಲೂಕು ಘಟಕ, ಮಹಿಳಾ ಸಮಾಜ, ಯುವ ಘಟಕ, ಕಲಾವಿದರ ಸಮಾಜ ಹಾಗೂ ವಿದ್ಯಾರ್ಥಿ ಘಟಕದ ಆಶ್ರಯದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತ್ಯುತ್ಸವ ಹಾಗೂ ಕರ್ಪೂರಿ ಠಾಕೂರ್ ಜನ್ಮ ಶತಮಾನೋತ್ಸವ ಸಾನ್ನಿಧ್ಯ ವಹಿಸಿ ಮಾತನಾಡಿದರು,
ಸವಿತಾ ಸಮಾಜಕ್ಕೆ ತನ್ನದೆ ಆದ ಇತಿಹಾಸ ಇದೆ. ವೇದಗಳ ಕಾಲದಿಂದಲೂ ಇಂದಿನವರೆವಿಗೂ ಸಂಗೀತ ಸೇವೆಯಲ್ಲಿ ಸೇವೆ ಅತಿ ಅಮೋಘವಾಗಿದೆ. ಭಗವಂತ ಹಾಗೂ ರಾಜ ಮಹಾರಾಜರ ಕಾಲದಲ್ಲಿ ಸಂಗೀತ ಸೇವೆ ಮಾಡುವುದರ ಮೂಲಕ ನಿಮ್ಮ ಸಮಾಜದವರು ಅವರಿಗೆ ಸಂತೋಷವನ್ನು ನೀಡುತ್ತಿದ್ದರು. ಸವಿತಾ ಸಮಾಜದವರು ಇತರೆ ಸಮಾಜಕ್ಕೆ ಉತ್ತಮವಾದ ಸೇವೆ ನೀಡುವುದರ ಮೂಲಕ ಬೇರೆ ಸಮಾಜದರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.ವಿಶ್ವಕರ್ಮ ಸಮಾಜದ ಮುಖಂಡರಾದ ಪ್ರಸನ್ನಕುಮಾರ್ ಮಾತನಾಡಿ, ಸಣ್ಣ ಸಮಾಜಗಳು ಸಂಘಟಿತರಾಗದಿದ್ದರೆ ಸರ್ಕಾರದ ಯಾವುದೇ ರೀತಿಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ. ನಿಮ್ಮ ಸಮಾಜದಲ್ಲಿನ ಸಣ್ಣ ಸಣ್ಣ ಮನೋಭಾವ ಬಿಡಬೇಕಿದೆ. ಹೋರಾಟದ ಮನೋಭಾವ ರೂಢಿಸಿಕೊಳ್ಳಬೇಕಿದೆ. ಸರ್ಕಾರ ವಿವಿಧ ನಿಗಮ ಮಂಡಳಿಗಳಲ್ಲಿ ನಾಮ ನಿರ್ದೇಶನ ಮಾಡುವುದರ ಮೂಲಕ ಈ ಸಮಾಜವನ್ನು ಗುರುತಿಸಬೇಕಿದೆ ಎಂದು ತಿಳಿಸಿದರು.
ಕೆಡಿಪಿ ಸದಸ್ಯ ಕೆ.ಸಿ. ನಾಗರಾಜು ಮಾತನಾಡಿ, ಸವಿತಾ ಸಮಾಜದವರು ಸಂಘಟಿತರಾಗುವ ಮೂಲಕ ಸಮಾಜದ ಕೆಲಸವನ್ನು ಜಾಗರೂಕತೆಯಿಂದ ಮಾಡಬೇಕು. ನಿಮ್ಮ ಸಮಾಜ ಸಂಘಟಿಸಿ, ಸಮಾಜದ ಏನೇ ಕೆಲಸಗಳಿದ್ದರು ಸಹಾ ಅದನ್ನು ನಾನು ಮಾಡಿಕೊಡುತ್ತೇನೆ, ಮುಖ್ಯಮಂತ್ರಿ ಬಳಿ ಹೋಗಲು ಸಹಾ ನಾನು ಸಿದ್ಧನಿದ್ದೇನೆ. ನಿಮ್ಮ ಸಹಾಯಕ್ಕೆ ಶಾಸಕ ವೀರೇಂದ್ರ ಸಹಾ ಇದ್ದಾರೆ. ನಿಮ್ಮ ಜನಾಂಗವನ್ನು ಎಸ್.ಸಿ.ಗೆ ಸೇರ್ಪಡೆ ಮಾಡಬೇಕಿದೆ. ಇದರ ಬಗ್ಗೆಯೂ ಸಹಾ ನಾನು ಗಮನ ನೀಡುತ್ತೇನೆ ಎಂದರು.ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಮಾತನಾಡಿ, ನನಗೆ ಮಡಿವಾಳ ಮತ್ತು ಸವಿತಾ ಸಮಾಜ ಪ್ರೀತಿಗೆ ಪಾತ್ರ ಸಮಾಜಗಳಾಗಿವೆ, ಈ ಎರಡು ಸಮಾಜ ಬೇರೆಯವರಿಗೆ ಸಹಾಯ ಮಾಡುವ ಸಮಾಜಗಳಾಗಿವೆ. ಈಗ ಸವಿತಾ ಸಮಾಜದ ಕೆಲಸವನ್ನು ಮೇಲ್ವರ್ಗದವರು ಸಹಾ ಬ್ಯೂಟಿಪಾರ್ಲರ ಹೆಸರಿನಲ್ಲಿ ಹೈಜಾಕ್ ಮಾಡುತ್ತಿದ್ದಾರೆ. ಇದರ ಬಗ್ಗೆ ಯಾರು ಸಹಾ ಹೋರಾಟವನ್ನು ಮಾಡುತ್ತಿಲ್ಲ, ಸಣ್ಣ ಸಣ್ಣ ಸಮಾಜವನ್ನು ಸರ್ಕಾರ ಗುರುತಿಸಿ ಅವರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದರು.
ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ನಗರ ಮಟ್ಟದಲ್ಲಿ ಸಮಾಜ ಸಂಘಟಿಸಲಾಗುತ್ತಿದೆ. ಗ್ರಾಮಾಂತರ ಮಟ್ಟದಲ್ಲಿಯೂ ಸಹಾ ಸಮಾಜವನ್ನು ಸಂಘಟಿಸಲಾಗುವುದು ಎಂದರು.ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಲಿಂಗರಾಜು, ಸಂಪಿಗೆ ತಿಪ್ಪೇಸ್ವಾಮಿ, ವೇಣುಗೋಪಾಲ್, ಬಾಲು, ಶ್ರೀನಿವಾಸ್, ನರಸಿಂಹ, ರಾಜಣ್ಣ, ಚಲಪತಿ, ಕುಮಾರ್, ಕೃಷ್ಣಮೂರ್ತಿ, ಬಸವರಾಜು, ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸೇರಿ ಸಮಾಜದ ಮುಖಂಡರು ಭಾಗವಹಿಸಿದ್ದರು.
ಗಂಗಾಧರ್ ಮತ್ತು ಸಂಗಡಿಗರು ನಾಡಗೀತೆ ಗಾಯನ ಮಾಡಿದರು, ಕುಮಾರ್ ಸ್ವಾಗತಿಸಿದರು. ಗುರುಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.