ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಆಚರಣೆ ಮಾಡುವವರು ಅವಶ್ಯವಿದ್ದಲ್ಲಿ ಪೂರ್ವ ಲಿಖಿತ ಷರತ್ತು ಬದ್ಧ ಮಿತ ಶಬ್ದ ವ್ಯವಸ್ಥೆಗ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ.

ಧಾರವಾಡ:

ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ವ್ಯವಸ್ಥೆ, ಲೌಡ್‌ಸ್ಪೀಕರ್‌ ಹಾಗೂ ಡಿಜೆ ಅತಿಯಾದ ಬಳಕೆ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕ ಶಾಂತಿ, ಆರೋಗ್ಯ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶಬ್ದ ಮಾಲಿನ್ಯ ನಿಯಮಗಳಡಿ ಡಿಜೆ ವ್ಯವಸ್ಥೆ, ಹೆಚ್ಚಿನ ಡೆಸಿಬೆಲ್ ಶಬ್ದ ವೃದ್ಧಿ ಸಾಧನಗಳ ನಿಯಂತ್ರಣ, ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಆಜ್ಞೆ ಹೊರಡಿಸಿದ್ದಾರೆ.

ವಸತಿ ಪ್ರದೇಶ, ಸೈಲೆಂಟ್ ಝೋನ್‌ಗಳು, ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶ, ರಸ್ತೆ ಸಂಚಾರ ದಟ್ಟಣೆ ಪ್ರದೇಶ, ಸಮುದಾಯ ಸೂಕ್ಷ್ಮ ಪ್ರದೇಶ ಹಾಗೂ ಇಡೀ ಜಿಲ್ಲೆಯಾದ್ಯಂತ ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಡಿಜೆ ಅಥವಾ ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.ಯಾವುದೇ ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಆಚರಣೆ ಮಾಡುವವರು ಅವಶ್ಯವಿದ್ದಲ್ಲಿ ಪೂರ್ವ ಲಿಖಿತ ಷರತ್ತು ಬದ್ಧ ಮಿತ ಶಬ್ದ ವ್ಯವಸ್ಥೆಗ ಮಾತ್ರ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಆದೇಶದ ಉಲ್ಲಂಘಿಸಿದರೆ ಆಯೋಜಕರು ವೈಯಕ್ತಿಕವಾಗಿ ಹೊಣೆಗಾರರು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಸೆ. 13ರಿಂದ 27ರ ವರೆಗೆ ಮದ್ಯ ನಿಷೇಧ:ಗಣೇಶೋತ್ಸವದ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ, ಕಾಪಾಡುವ ಹಿತದೃಷ್ಟಿಯಿಂದ ಧಾರವಾಡ, ಅಳ್ಳಾವರ, ಹುಬ್ಬಳ್ಳಿ, ಕಲಘಟಗಿ, ನವಲಗುಂದ, ಅಣ್ಣಿಗೇರಿ ಮತ್ತು ಕುಂದಗೋಳ ತಾಲೂಕುಗಳಲ್ಲಿ ಸೆ. 13ರ ರಾತ್ರಿ 11.59ರಿಂದ ಸೆ. 27ರ ಬೆಳಗ್ಗೆ 6ರ ವರೆಗೆ (ಗಣೇಶ ಮೂರ್ತಿ ವಿಸರ್ಜನೆಯ ದಿನದಂದು) ವಿವಿಧ ದಿನಗಳಲ್ಲಿ ಜಿಲ್ಲೆಯಲ್ಲಿ ಮದ್ಯಪಾನ, ಮದ್ಯ ಮಾರಾಟ, ಮದ್ಯ ಸಾಗಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಮದ್ಯ ನಿಷೇಧದ ದಿನದಲ್ಲಿ ಯಾರಾದರೂ ಮದ್ಯ ಮಾರಾಟ ಮಾಡಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಶಾಂತಿ, ಸೌಹಾರ್ದತೆಯಿಂದ ಗೌರಿ-ಗಣೇಶ ಆಚರಿಸಿ:

ಗೌರಿ-ಗಣೇಶ ಹಬ್ಬವನ್ನು ಜಿಲ್ಲೆಯಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯದಿಂದ ಆಚರಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಗುಂಜನ್ ಆರ್ಯ ಸೂಚಿಸಿದರು.

ನಗರದ ಪೊಲೀಸ್ ಹೆಡ್‌ಕ್ವಾಟರ್ಸ್‌ದ ಶ್ರೀದುರ್ಗಾದೇವಿ ದೇವಸ್ಥಾನದ ಸಭಾಭವನದಲ್ಲಿ ಗೌರಿ-ಗಣೇಶ ಹಬ್ಬದ ಜಿಲ್ಲಾಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಎಲ್ಲರೂ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಚರಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು. ಡಿಜೆ ಬಳಕೆಯಿಂದ ಉಂಟಾಗಬಹುದಾದ ಶಬ್ದ ಮಾಲಿನ್ಯ ಹಾಗೂ ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು. ಸಭೆಯಲ್ಲಿ ಗ್ರಾಮೀಣ ಉಪವಿಭಾಗದ ಡಿಎಸ್‌ಪಿ ವಿನೋಧ ಮುಕ್ತೆದಾರ ಸ್ವಾಗತಿಸಿದರು. ಜಿಲ್ಲೆಯ ವಿವಿಧ ತಾಲೂಕುಗಳ ಎಲ್ಲ ಸಮುದಾಯ ಮುಖಂಡರು, ಫ್ಲೆಕ್ಸ್ ಹಾಗೂ ಬ್ಯಾನರ್ ಮುದ್ರಣ ಅಂಗಡಿಗಳ ಮಾಲೀಕರು, ಡಿಜೆ ಸಿಸ್ಟಮ್ ಮಾಲೀಕರು, ಆರೋಗ್ಯ, ಲೋಕೋಪಯೋಗಿ, ಹೆಸ್ಕಾಂ, ಪರಿಸರ, ಅಬಕಾರಿ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳಿದ್ದರು.