ಸೆ.26ರಂದು ಮಕ್ಕಳಿಗೆ ಬಾಲ ದಸರಾ ಆಯೋಜನೆ: ಪಲ್ಲವಿ

| Published : Sep 17 2025, 01:05 AM IST

ಸಾರಾಂಶ

ಕೆ.ಆರ್.ಪೇಟೆ ತಾಲೂಕಿನ ಎಲ್ಲಾ ಶಾಲೆಗಳ ಎರಡರಿಂದ ಆರು ವರ್ಷದೊಳಗಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ತಮ್ಮ ಹೆಸರನ್ನು ನೋಂದಣಿಸಿಕೊಳ್ಳಲು ಸೆಪ್ಟೆಂಬರ್ 18 ಕೊನೆ ದಿನ. ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಫಸ್ಟ್ ಕ್ರೈ ಇಂಟಲಿಟಾಟ್ಸ್ ಶಾಲೆಯಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಶೀರ್ಷಿಕೆ ಯಡಿಯಲ್ಲಿ ಸಂಸ್ಕೃತಿ ಸಂಭ್ರಮದ ಅಂಗವಾಗಿ ಸೆ.26ರಂದು 2 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಬಾಲ ದಸರಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥೆ ಪಲ್ಲವಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಬಗ್ಗೆ ಅಭಿಮಾನ ಮೂಡಿಸಲು ಬಾಲ ದಸರಾವನ್ನು ಆಯೋಜಿಸಲಾಗಿದೆ. ಒಂದು ಮಗು ಒಂದು ಸ್ಪರ್ಧೆಯಲ್ಲಿ ಉಚಿತವಾಗಿ ಭಾಗವಹಿಸಲು ಅವಕಾಶವಿದೆ ಎಂದರು.

ತಾಲೂಕಿನ ಎಲ್ಲಾ ಶಾಲೆಗಳ ಎರಡರಿಂದ ಆರು ವರ್ಷದೊಳಗಿನ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶವಿದೆ. ತಮ್ಮ ಹೆಸರನ್ನು ನೋಂದಣಿಸಿಕೊಳ್ಳಲು ಸೆಪ್ಟೆಂಬರ್ 18 ಕೊನೆ ದಿನ. ಬಾಲ ದಸರಾ ಸ್ಪರ್ಧೆಯಲ್ಲಿ ಶ್ಲೋಕಗಳು, ಕಥೆ ಹೇಳುವುದು, ಜಾನಪದ ಗೀತೆಗಳನ್ನು ಹಾಡುವುದು, ಚಿತ್ರಗಳಿಗೆ ಬಣ್ಣ ತುಂಬುವುದು, ರಂಗೋಲಿ ಮತ್ತು ಹೂವುಗಳನ್ನು ಬಿಡಿಸುವುದು, ಕ್ಲೇ ಮಾಡಲಿಂಗ್ ಮಾಡುವುದು ಸೇರಿದಂತೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.

ಬೆಳಗ್ಗೆ 9.30ರಿಂದ 12.30 ರವರೆಗೆ ಸ್ಪರ್ಧೆಗಳು ನಡೆಯಲಿವೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಪುಟಾಣಿ ಮಕ್ಕಳಿಗೆ ಪ್ರಶಸ್ತಿ ಪತ್ರಗಳ ಜೊತೆಗೆ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಶಿಕ್ಷಕಿ ಗಂಗಾ, ಸಂಯೋಜಕಿ ಭೂಮಿಕ ಇದ್ದರು.

ಪ್ರತಿಯೊಬ್ಬರಿಗೂ ಪೌಷ್ಟಿಕ ಆಹಾರ ಅಗತ್ಯ: ಶಿವಮೂರ್ತಿ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದೇಹದ ಆರೋಗ್ಯ ಮತ್ತು ಉತ್ತಮ ಕಾರ್ಯ ನಿರ್ವಹಣೆಗೆ ಪೌಷ್ಟಿಕ ಆಹಾರ ಅಗತ್ಯವಾಗಿದೆ ಎಂದು ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಹೇಳಿದರು.

ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಪಂ ಹಾಗೂ ಸ್ಥಳೀಯ ಆಯುಷ್ಮಾನ್ ಆರೋಗ್ಯ ಕೇಂದ್ರದಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಪೌಷ್ಟಿಕ ಆಹಾರ ಶಿಬಿರದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚು ಅರಿವು ಮೂಡಿಸಿ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ಸಾರ್ವಜನಿಕರಿಗೆ ತಲುಪುವಂತೆ ನೋಡಿಕೊಳ್ಳಿ ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ್, ಪಿಡಿಒ ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಗುರುಪ್ರಸಾದ್, ಮುಖ್ಯ ಶಿಕ್ಷಕ ರಾಮೇಗೌಡ, ಅಂಗನವಾಡಿ ಮೇಲ್ವಿಚಾರಕಿ ಆಶಾ ಎಲ್., ಪೋಷಣ್ ಅಭಿಯಾನದ ಸಂಯೋಜಕಿ ಪಲ್ಲವಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಜಯಮ್ಮ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳ ಪೋಷಕರು ಹಾಜರಿದ್ದರು.