ಸಾರಾಂಶ
ಚಾಮರಾಜನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಸೋಮವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್. ಭಾರತಿ ಅವರು ಮಾತನಾಡಿದರು. ಎಸ್ಪಿ ಡಾ.ಬಿ.ಟಿ.ಕವಿತಾ, ನ್ಯಾ.ಈಶ್ವರ ಇದ್ದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗ್ರಾಮಗಳಲ್ಲಿ ಬಹಿಷ್ಕಾರ, ದಂಡ ವಿಧಿಸುವಿಕೆ, ಕಾನೂನು ಕೈಗೆತ್ತಿಕೊಳ್ಳುವ ಪ್ರಕರಣಗಳು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್.ಭಾರತಿ ಅವರು ತಿಳಿಸಿದರು. ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ಸೋಮವಾರ ಗುಂಡ್ಲುಪೇಟೆ ತಾಲೂಕಿನ ಯಡವನಹಳ್ಳಿಯಲ್ಲಿ ಒಂದೇ ಕೋಮಿನ ಕುಟುಂಬಗಳಿಗೆ ಅದೇ ಕೋಮಿನ ಮುಖಂಡರು, ಯಜಮಾನರು ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದ ಮುಖಂಡರು ಮತ್ತು ಬಹಿಷ್ಕಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಕುಟುಂಬ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದಲ್ಲಿ ಯಾವುದೇ ತಪ್ಪುಗಳಾದರೆ ಪೊಲೀಸ್ ಅವರಿಗೆ ಮಾಹಿತಿ ನೀಡಬೇಕು. ತಪ್ಪು ಎಸಗಿದವರ ವಿರುದ್ಧ ಬಹಿಷ್ಕಾರ ಹಾಕುವ ಪದ್ದತಿ ಯಾರಿಗೂ ಇಲ್ಲ. ತಪ್ಪು ಎಸಗಿದ್ದಾರೆ ಎನ್ನುವವರ ವಿರುದ್ಧ ದಂಡನೆ ವಿಧಿಸುವ ಯಾವುದೇ ಅಧಿಕಾರ ನಿಮಗಿಲ್ಲ. ಕಾನೂನು ಕೈಗೆತ್ತಿಕೊಳ್ಳುವ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಬಹಿಷ್ಕಾರ ಹೇರುವುದು ಕಾನೂನು ಬಾಹಿರ. ಈ ಬಗ್ಗೆ ಯಾವುದೇ ಮಾನ್ಯತೆ ಇಲ್ಲ. ಬಹಿಷ್ಕಾರ ಸೇರಿದಂತೆ ತೊಂದರೆ ನೀಡುವ ಕಟ್ಟುಪಾಡುಗಳನ್ನು ಕೈಬಿಡಬೇಕು. ಕಾನೂನು ಪಾಲನೆಯನ್ನು ಪ್ರತಿಯೊಬ್ಬರು ಮಾಡಬೇಕು. ಕಾನೂನಿಗೆ ಹೊರತಾದ ಯಾವುದೇ ತೀರ್ಮಾನ ಮಾಡುವಂತಿಲ್ಲ. ತಪ್ಪು ನಡೆ, ನಿರ್ಧಾರ ಕೈಗೊಂಡು ಮತ್ತೊಂದು ಕುಟುಂಬವನ್ನು ಸಂಕಷ್ಟಕ್ಕೆ ಗುರಿ ಮಾಡಿದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಇದ್ದೇವೆ. ಕಾನೂನನ್ನು ಪ್ರತಿಯೊಬ್ಬರು ಗೌರವಿಸಬೇಕು. ಬಹಿಷ್ಕಾರ, ದಂಡ ವಿಧಿಸುವಂತಹ ಪದ್ಧತಿಗಳನ್ನು ಮುಂದುವರೆಸಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಗ್ರಾಮದಲ್ಲಿ ಯಾವುದೇ ಕಲಹ, ಇನ್ನಿತರ ವ್ಯತ್ಯಾಸಗಳಾದಾಗ ನಮಗೆ ಮಾಹಿತಿ ನೀಡಿ, ದೂರು ದಾಖಲಿಸಬೇಕು. ನಿಮ್ಮಲ್ಲಿಯೇ ತೀರ್ಮಾನ ಮಾಡಿ ಕಠಿಣ ಕ್ರಮಗಳನ್ನು ಹೇರುವಂತಿಲ್ಲ. ಒಳ್ಳೆಯ ಉದ್ದೇಶಗಳಿಗೆ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಊರಿನ ಯಜಮಾನರು ಮುಂದಾಗಬೇಕು. ಕಾನೂನು ಬಾಹಿರ ಕ್ರಮಗಳಿಗೆ ಅವಕಾಶ ಕೊಡಬಾರದು ಎಂದು ತಿಳಿಸಿದರು.ಸಿವಿಲ್ ನ್ಯಾಯಾಧೀಶ ಈಶ್ವರ ಮಾತನಾಡಿ, ಕಾನೂನಿಗೆ ವಿರುದ್ಧವಾದ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಗ್ರಾಮದ ಹಂತದಲ್ಲಿ ಮತ್ತೊಬ್ಬರಿಗೆ ತೊಂದರೆ ಉಂಟುಮಾಡುವ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ಇತರರು ಸಭೆಯಲ್ಲಿ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))