ತುಂಗಭದ್ರಾ ನದಿಯಲ್ಲಿ ನೀರುನಾಯಿ ಪ್ರತ್ಯಕ್ಷ

| Published : Jan 25 2024, 02:00 AM IST

ಸಾರಾಂಶ

ಕೊಪ್ಪಳ ತಾಲೂಕಿನ ಕಾತರಗಿ ಬಳಿ ತುಂಗಭದ್ರಾ ನದಿಯಲ್ಲಿ ಅಪರೂಪದ ನೀರುನಾಯಿಗಳು ಕಾಣಿಸಿಕೊಂಡಿವೆ. ನೀರುನಾಯಿಗಳು ಚೆಲ್ಲಾಟವಾಡುವುದನ್ನು ಛಾಯಾಗ್ರಾಹಕ ಅಮೀನ್ ಅತ್ತಾರ ಸೆರೆಹಿಡಿದಿದ್ದಾರೆ.

ಕೊಪ್ಪಳ: ತಾಲೂಕಿನ ಕಾತರಕಿ ಗ್ರಾಮದ ಬಳಿ ಕುಡಿಯುವ ನೀರು ಪೂರೈಕೆ ಮಾಡುವ ಜಾಕ್‌ವೆಲ್‌ಗೆ ಹೊಂದಿಕೊಂಡು ತುಂಗಭದ್ರಾ ನದಿಯಲ್ಲಿ ನೀರುನಾಯಿಗಳು ಕಾಣಿಸಿಕೊಂಡಿವೆ.

ಪ್ರಾಣಿಪ್ರಿಯ ಛಾಯಾಗ್ರಾಹಕ ಅಮೀನ್ ಅತ್ತಾರ ಅವರು ತಮ್ಮ ಕ್ಯಾಮೆರಾದಲ್ಲಿ ಈ ಅಪರೂಪದ ನೀರುನಾಯಿಗಳ ಚಿನ್ನಾಟವನ್ನು ಸೆರೆಹಿಡಿದಿದ್ದಾರೆ.

ಅಪರೂಪದ ಪ್ರಭೇದವಾಗಿರುವ ನೀರುನಾಯಿ ತುಂಗಭದ್ರಾ ನದಿಯುದ್ದಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದವು. ಆದರೆ, ಇತ್ತೀಚೆಗೆ ನದಿಯಲ್ಲಿ ಬೇಸಿಗೆಯ ವೇಳೆಯಲ್ಲಿ ನೀರಿನ ಅಭಾವ ಆಗುವುದು ಮತ್ತು ಮೀನುಗಾರರು ಮೀನು ಹಿಡಿಯುವುದಕ್ಕೆ ನಾನಾ ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಇವುಗಳು ಅಳಿವಿನಂಚಿಗೆ ತಲುಪುವಂತೆ ಆಗಿದೆ.

ಕೊಪ್ಪಳ ತಾಲೂಕಿನಲ್ಲಿ ತುಂಗಭದ್ರಾ ನದಿಯ 34 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿ, ಕೆಲವು ಚಟುವಟಿಕೆಗೆ ನಿಷೇಧ ಹೇರಲಾಗಿದೆ. ಆದರೆ, ಈ ಆದೇಶ ಕೇವಲ ಕಾಗದದಲ್ಲಿ ಮಾತ್ರ ಇದ್ದು, ಸರಿಯಾಗಿ ಜಾರಿ ಮಾಡುತ್ತಿಲ್ಲ ಎನ್ನುವುದು ಪ್ರಾಣಿಪ್ರಿಯರ ಅಸಮಾಧಾನವಾಗಿದೆ.

ತುಂಗಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಜನವರಿ ವೇಳೆಗೆ ದೇಶ, ವಿದೇಶಗಳ ಪಕ್ಷಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತವೆ. ಅವುಗಳ ಅಂದ, ಚಂದ ನೋಡುವುದೇ ಕಣ್ಣಿಗೆ ಹಬ್ಬ. ಇಂಥ ಅಪರೂಪದ ಹಕ್ಕಿಗಳ ದೃಶ್ಯಗಳನ್ನು ಸೆರೆ ಹಿಡಿಯಲೆಂದೇ ಅಮೀನ್ ಅತ್ತಾರ ಅವರು ತುಂಗಭದ್ರಾ ನದಿಯ ದಡದಲ್ಲಿ ಸುತ್ತಾಡುವ ವೇಳೆಯಲ್ಲಿ ಬೆಳಗಿನ ಸಮಯದಲ್ಲಿ ಈ ನೀರುನಾಯಿಗಳು ಆಟವಾಡುತ್ತಿರುವುದನ್ನು ಗಮನಿಸಿ, ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.