ಸಾರಾಂಶ
ಕೋಲಾರ : ರಾಜ್ಯಾದ್ಯಂತ ಎಲ್ಲಾ ತಾಲೂಕು ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸುವ ಗುರಿ ಹೊಂದಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.ಮುಳಬಾಗಿಲು ತಾಲೂಕಿನ ನಂಗಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 12.5 ಕೋಟಿಗಳ ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವ ಹಾಗೂ 20 ಕೋಟಿಗಳ ವೆಚ್ಚದಲ್ಲಿ ಮುಳಬಾಗಿಲು ಹೆದ್ದಾರಿಯಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ 50 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಒಟ್ಟಾರೆ ಸುಮಾರು 32.5 ಕೋಟಿಗಳ ವೆಚ್ಚದಲ್ಲಿ ಮುಳಬಾಗಿಲು ತಾಲೂಕಿನ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು ಹಾಗೂ ನೂತನವಾಗಿ 50 ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ ಕಟ್ಟಲು ಉದ್ದೇಶಿಸಲಾಗಿದೆ. ಈ ಭಾಗದಲ್ಲಿ ಹೆರಿಗೆ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಸುಸಜ್ಜಿತ ಆಸ್ಪತ್ರೆಯ ಅಗತ್ಯವಿದೆ. ತಾಲೂಕಿನ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಆಗ ಮಾತ್ರ ಸ್ಥಳೀಯ ಶಾಸಕರ ಶ್ರಮ ಸಾರ್ಥಕತೆ ಪಡೆಯುತ್ತದೆ ಎಂದರು.
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಮಾತನಾಡಿ, ಈ ತಾಲೂಕು ರಾಜ್ಯದ ಗಡಿ ಭಾಗದಲ್ಲಿದ್ದು ಎಲ್ಲಾ ವಿಚಾರಗಳಲ್ಲಿ ಕಡೆಗಣಿಸಲಾಗಿದೆ. ಮುಳಬಾಗಿಲಿನಿಂದ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ಅಪಘಾತ ಪ್ರಕರಣಗಳು ಹೆಚ್ಚು ದಾಖಲಾಗುತ್ತದೆ. ಇಲ್ಲಿ ಸುಸಜ್ಜಿತ ಆಸ್ಪತ್ರೆಯ ಅಗತ್ಯವಿದೆ. ಸಚಿವರು ಹಾಗೂ ಮುಖ್ಯಮಂತ್ರಿಗಳು ಶಾಸಕರ ಮನವಿಗೆ ಓಗೊಟ್ಟು ಅಭಿವೃದ್ಧಿಗೆ ಸಹಕರಿಸುತ್ತಿದ್ದಾರೆಂದು ತಿಳಿಸಿದ್ದರು.
ಡಿಎಚ್‌ಒ ಡಾ.ಜಿ.ಶ್ರೀನಿವಾಸ್ ಮಾತನಾಡಿ, ಈ ತಾಲೂಕಿನಲ್ಲೂ ಅತಿ ಹೆಚ್ಚು ಹೆರಿಗೆ ಪ್ರಕರಣಗಳು ದಾಖಲಾಗುತ್ತಿದ್ದುದರಿಂದ ಸ್ಥಳೀಯ ಆಸ್ಪತ್ರೆ ಮೇಲೆ ಒತ್ತಡ ಉಂಟಾಗಿದೆ. ಸುಸಜ್ಜಿತ 50 ಹಾಸಿಗೆಗಳ ಹೊಸ ತಾಯಿ ಮಕ್ಕಳ ಆಸ್ಪತ್ರೆ ಸ್ಥಾಪಿಸಿದರೆ ನಗರದಲ್ಲಿರುವ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಮಾಡಬಹುದು. ಅಂತೆಯೇ ನಂಗಲಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲದರ್ಜೆಗೆರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಜಿಲ್ಲಾಧಿಕಾರಿ ಅಕ್ರಂ ಪಾಷ, ಮುಳಬಾಗಿಲು ತಹಸೀಲ್ದಾರ್ ವಿ.ಗೀತಾ, ಕಾರ್ಯಪಾಲಕ ಇಂಜಿನಿಯರ್‌ಗಳಾದ ಜೆ.ಆರ್.ಮುಕ್ಕಣ್ಣ, ಕೊಂಚಿಮುಲ್ ಮಾಜಿ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್ ಇದ್ದರು.