ಈ ಬಾರಿ ಬಿಜೆಪಿ ಗೆಲ್ಲಿಸುವುದೇ ನಮ್ಮ ಗುರಿ: ಶಾಸಕ ವಿಶ್ವನಾಥ್

| Published : Feb 28 2024, 02:36 AM IST

ಸಾರಾಂಶ

ಚಿಕ್ಕಬಳ್ಳಾಪುರದ ಪ್ರಭಾವಿ ನಾಯಕ, ಗೌರಿಬಿದನೂರು ಮಾಜಿ ಶಾಸಕ ಶಿವಶಂಕರರೆಡ್ಡಿಯವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಬಿಜೆಪಿ ಪಕ್ಷಕ್ಕೆ ಯಾರು ಬಂದರೂ ನಾವು ಸೇರಿಸಿಕೊಳ್ಳುತ್ತೇವೆ.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಇನ್ನೇನು ಕೆಲವೇ ದಿನಗಳಲ್ಲಿ ಲೊಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಕ್ಷೇತ್ರದಲ್ಲಿ ಅಭ್ಯರ್ಥಿಗಳ ವಿಚಾರದಲ್ಲಿ ಅನೇಕರು ಗೊಂದಲಕ್ಕೀಡಾಗಿದ್ದಾರೆ. ಆದರೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಯಾರೇ ಅಭ್ಯರ್ಥಿಯಾದರೂ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಯಲಹಂಕ ಶಾಸಕ ವಿಶ್ವನಾಥ್ ತಿಳಿಸಿದರು.

ತಾಲೂಕಿನ ಐತಿಹಾಸಿಕ ಹಿನ್ನೆಲೆಯ ಶ್ರೀ ಎಲ್ಲೋಡು ಆದಿನಾರಾಯಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಫರ್ಧಿಸಿ ಜಯ ಗಳಿಸಿದ್ದ ಸಂಸದ ಬಚ್ಚೇಗೌಡ ರವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇದರಿಂದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಅನೇಕರಿಗೆ ಗೊಂದಲವಿದೆ. ಈಗಾಗಲೇ ಅನೇಕರು ಆಕಾಂಕ್ಷಿಗಳು ಎಂದೂ ಸಹ ಹೇಳಿಕೊಂಡಿದ್ದಾರೆ. ಆದರೆ ಈ ಕುರಿತು ಕಾರ್ಯಕರ್ತರು ಗೊಂದಲಕ್ಕೆ ಗುರಿಯಾಗುವುದು ಬೇಡ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎರಡು ಮೂರು ದಿನಗಳಲ್ಲಿ ಎಲ್ಲಾ ಮುಖಂಡರು ಒಂದು ಕಡೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಗೊಂದಲ ನಿವಾರಿಸುತ್ತೇವೆ. ಯಾರೇ ಅಭ್ಯರ್ಥಿಯಾದರೂ ಸಹ ಬಿಜೆಪಿ ಪಕ್ಷವನ್ನು ಗೆಲ್ಲಿಸಲು ನಾವೆಲ್ಲರೂ ಕೆಲಸ ಮಾಡಬೇಕು ಎಂದರು.

ಮಾಜಿ ಸಚಿವ ಶಿವಶಂಕರರೆಡ್ಡಿ ಬಿಜೆಪಿ ಸೇರ್ಪಡೆ?:

ಚಿಕ್ಕಬಳ್ಳಾಪುರದ ಪ್ರಭಾವಿ ನಾಯಕ, ಗೌರಿಬಿದನೂರು ಮಾಜಿ ಶಾಸಕ ಶಿವಶಂಕರರೆಡ್ಡಿಯವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಬಿಜೆಪಿ ಪಕ್ಷಕ್ಕೆ ಯಾರು ಬಂದರೂ ನಾವು ಸೇರಿಸಿಕೊಳ್ಳುತ್ತೇವೆ. ಅವರು ಬಂದರೆ ಬಿಜೆಪಿ ಪಕ್ಷ ಕ್ಷೇತ್ರದಲ್ಲಿ ಮತಷ್ಟು ಬಲಿಷ್ಠವಾಗಲಿದೆ. ಕಾಂಗ್ರೆಸ್ ನಲ್ಲಿ ಅವರನ್ನು ಕೀಳಾಗಿ ನೋಡಲಾಗುತ್ತಿದೆ ಎಂದು ಶಾಸಕ ವಿಶ್ವನಾಥ್ ತಿಳಿಸಿದರು.

ಪುತ್ರ ಅಲೋಕ್ ಕುಮಾರ್ ಸ್ಪರ್ಧೆ:

ಇನ್ನೂ ಕ್ಷೇತ್ರದ ಯುವಕರು ಹಾಗೂ ಅನೇಕ ಮುಖಂಡರು ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಯುವ ಮುಖಂಡ ಅಲೋಕ್ ಕುಮಾರ್ ರವರನ್ನು ಸ್ಪರ್ಧಿಸುವಂತೆ ಕೋರುತ್ತಿದ್ದಾರೆ. ಸದ್ಯ ಅಲೋಕ್ ಕುಮಾರ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಈ ಬಾರಿಯ ಚುನಾವಣೆಯಲ್ಲಿ ವಿಶ್ವನಾಥ್ ಪುತ್ರ ಅಲೋಕ್ ಕುಮಾರ್ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ಕೊಟ್ಟರು.

ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು ಮಾತನಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡಿಯಾಗಿ ಕೆಲವೊಂದು ಭಾಗ್ಯಗಳ ಹೆಸರಿನಲ್ಲಿ ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ. ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಶ್ವನಾಥ್ ಹಾಗೂ ಮುನಿರಾಜುರವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಬಳಿಕ ಎಲ್ಲೋಡು ಆದಿನಾರಾಯಣಸ್ವಾಮಿಯ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.