ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಸಾವಿರಾರು ವರ್ಷಗಳ ಇತಿಹಾಸ ಇರುವ ಜಾನಪದ ಕಲೆಗಳನ್ನು ನಮ್ಮ ಪೂರ್ವಿಕರು ಉಳಿಸಿ ಬೆಳೆಸಿದ್ದಾರೆ ಎಂದು ಜಾನಪದ ಗಾಯಕ ಗೋ.ನಾ. ಸ್ವಾಮಿ ತಿಳಿಸಿದರು.ನಗರದ ಮಹಾರಾಜ ಕಾಲೇಜು ಪಠ್ಯೇತರ ಚಟುವಟಿಕೆಗಳ ಸಮಿತಿಯು ಶತಮಾನೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಲೇಜು ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಸಿನಿಮಾಗೆ 100 ವರ್ಷಗಳ ಇತಿಹಾಸವಿದೆ. ನಮ್ಮೆ ಹೆಮ್ಮೆಯ ಜಾನಪದ ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.
ನಾನು ಜಾನಪದ ಗಾಯಕನಾದ್ದರಿಂದ 62 ದೇಶಗಳನ್ನು ನೋಡಿದೆ. ಒಮ್ಮೆ ಅಮೆರಿಕಾದ ಕಾರ್ಯಕ್ರಮ ನೀಡುವಾಗ ಜಾನಪದ ಗಾಯಕರನ್ನು ದೂರ ನಿಲ್ಲಿಸಿದ್ದರು. ಬಳಿಕ ನಮ್ಮ ಜಾನಪದದ ಶಕ್ತಿಗೆ ಬೆರಗಾಗಿ ಬಹಳ ಗೌರವಿಸಿದರು ಎಂದು ಅವರು ಹೇಳಿದರು.2000 ನಂತರ ಬಂದ ಸಿನಿಮಾಗಳ ಹಾಡುಗಳನ್ನು ಕೇಳಲು ಆಗದು, ಸಿನಿಮಾ ನೋಡಲೂ ಆಗದು. ಮದ್ಯಪಾನ ಮತ್ತು ಹುಡುಗಿಯ ಮೇಲೆ ಬರೆದ ಹಾಡುಗಳು ಬಹಳ ಹಿಟ್ ಆಗಿವೆ. ಈ ಹಾಡುಗಳನ್ನು ಬರೆದವರು ಸಾವಿರಾರು ಯುವಕರ ಬದುಕನ್ನು ಹಾಳು ಮಾಡಿದ್ದಾರೆ. ಕೇಸರಿ ತಿನ್ನು, ಪಾನ್ ಪರಾಗ್, ಹನ್ಸ್ ತಿನ್ನುವಂತೆ ಜಾಹೀರಾತುಗಳು ಯುವಕರ ಬದುಕನ್ನು ಹಾಳು ಮಾಡಿವೆ ಎಂದು ಅವರು ವಿಷಾದಿಸಿದರು.
ಯಾವ ದೇಶದಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಾನು ನೋಡಿಲ್ಲ. ನಮ್ಮಲ್ಲಿ ಏನೇನೋ ಜಗಿದು ಉಗಿಯುತ್ತಾರೆ. ಇದು ಸಾರ್ವಜನಿಕ ಸಭ್ಯತೆ ಅಲ್ಲ. ಮದ್ಯಪಾನ, ಧೂಮಪಾನದಿಂದ ಕ್ಯಾನ್ಸರ್ ಉಲ್ಬಣಗೊಳ್ಳುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು. ದುಶ್ಚಟಗಳಿಂದ ದೂರವಿದ್ದು ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದರು.ನಿಮ್ಮ ಉದ್ಧಾರವನ್ನು ಯಾರು ಮಾಡುವುದಿಲ್ಲ. ನೀವೇ ನಿಮ್ಮ ಉದ್ಧಾರ ಮಾಡಿಕೊಳ್ಳಬೇಕು. ಈ ದೇಶ ನಮಗೇ ಎಲ್ಲವನ್ನೂ ಕೊಟ್ಟಿದೆ. ದೇಶದ ಮೇಲೆ ಅಭಿಮಾನ ಉಳಿಸಿಕೊಳ್ಳಬೇಕು. ನಮ್ಮಲ್ಲಿ ಇನ್ನೂ ನಂಬಿಕೆ, ಬಾಂಧವ್ಯ ಉಳಿದಿದೆ ಎಂದು ಅವರು ತಿಳಿಸಿದರು.
ಈ ಕಾರ್ಯಕ್ರಮವನ್ನು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸಿದರು. ಡಿಸಿಪಿ ಕೆ.ಎಸ್. ಸುಂದರ್ ರಾಜ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಸಿ.ದೇವರಾಜೇಗೌಡ, ಆಡಳಿತಾಧಿಕಾರಿ ಪ್ರೊ.ಕೆ. ತಿಮ್ಮಯ್ಯ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಪ್ರೊ. ರಾಚಯ್ಯ ಮೊದಲಾದವರು ಇದ್ದರು.ನಾಳೆ ಲಯನ್ಸ್ ಕ್ಲಬ್ ನಿಂದ ಸಪ್ತ ಸಂಪದ ಕಾರ್ಯಕ್ರಮ
ಮೈಸೂರು: ದಿ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಲಯನ್ಸ್ ಕ್ಲಬ್ಸ್ ಪಿಎಂಜೆಎಫ್‌ನ ಅಂತಾರಾಷ್ಟ್ರೀಯ ಸಂಘವು 16ನೇ ವಾರ್ಷಿಕ ಬಹು ಜಿಲ್ಲಾ ಸಮಾವೇಶವಾದ ಸಪ್ತ ಸಂಪದ ಕಾರ್ಯಕ್ರಮವನ್ನು ಮೇ 18 ರಂದು ಮುಕ್ತ ವಿವಿ ಘಟಿಕೋತ್ಸವ ಸಭಾಂಗಣದಲ್ಲಿ ಆಯೋಜಿಸಿದೆ ಎಂದು ಡಾ.ಎನ್. ಕೃಷ್ಣೇಗೌಡ ತಿಳಿಸಿದರು.ಅಂತಾರಾಷ್ಟ್ರೀಯ ನಿರ್ದೇಶಕ ಪಂಕಜ್ ಮೆಹ್ತಾ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಮಾಜಿ ನಿರ್ದೇಶಕ ಕೆ. ವಂಶಿಧರ್ ಬಾಬು ಮತ್ತು ವಿ.ವಿ. ಕೃಷ್ಣರೆಡ್ಡಿ ಅವರು ಗೌರವ ಅತಿಥಿಯಾಗಿ ಪಾಲ್ಗೊಳ್ಳುವರು. ಮಾಜಿ ಜಿಲ್ಲಾ ಗವರ್ನರ್ ಮತ್ತು ಕ್ಯಾಬಿನೆಟ್ ಸಲಹೆಗಾರ ಜಿಲ್ಲಾ 317ಜಿನ ಕೆ. ದೇವೇಗೌಡ, ಪಿಎಂಜೆಎಫ್ ಬಹು ಅತಿಥೇಯ ಸಮಿತಿ ನೇತೃತ್ವ ವಹಿಸಿದ್ದಾರೆ. ಸಮಿತಿ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್‌ಪಾಲ್ಗೊಳ್ಳುವರು.
ಎನ್. ಕೃಷ್ಣೇಗೌಡರು ಕರ್ನಾಟಕ, ಅಂಧ್ರಪ್ರದೇಶ ಮತ್ತು ಗೋವಾದಾದ್ಯಂತ 20,00೦ಕ್ಕೂ ಹೆಚ್ಚು ಲಯನ್ಸ್‌ಸದಸ್ಯರನ್ನು ಹೊಂದಿರುವ 7 ಲಯನ್‌ಅಂತಾರಾಷ್ಟ್ರೀಯ ಜಿಲ್ಲೆಗಳ ಮುಖ್ಯಸ್ಥರಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎನ್. ಸುಬ್ರಮಣ್ಯ, ಯೋಗೇಶ್, ನವೀನ್ ಸುಬ್ರಮಣ್ಯ, ಡಿ.ಎಚ್. ವೆಂಕಟೇಶ್, ಲೋಕೇಶ್ ಇದ್ದರು.