ಸಾರಾಂಶ
ಕನಕಪುರ: ರಾಜ್ಯ ಸರ್ಕಾರದಿಂದ 2025-26ನೇ ಸಾಲಿನ ಯೋಜನೆಯಲ್ಲಿ ಬಂಜಾರ ಜನಾಂಗದ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಕುರಿತು ಜಾಗೃತಿ ಮೂಡಿಸಲು "ಬಂಜಾರ ಅಕಾಡೆಮಿ ನಡೆ ತಾಂಡಾದ ಕಡೆ ಅಭಿಯಾನ "ಕ್ಕೆ ತಾಲೂಕಿನ ಚೌಕಸಂದ್ರ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಬಂಜಾರ ಅಕಾಡೆಮಿ ಅಧ್ಯಕ್ಷ ಹಾಗೂ ರಂಗತಜ್ಞ ಡಾ.ಎ.ಆರ್.ಗೋವಿಂದಸ್ವಾಮಿ ಸಂತ ಸೇವಾಲಾಲ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಅಡಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬಂಜಾರರ ಕಲೆ ಸಾಹಿತ್ಯ ಸಂಸ್ಕೃತಿಗಳು ಸ್ವಸ್ಥ ಸಮಾಜ ಹಾಗೂ ಪ್ರಬುದ್ಧ ಸಮಾಜ ಕಟ್ಟಲು ಬಹಳ ಸಹಕಾರಿಯಾಗಿ ವಿಶ್ವದ ಸಾಂಸ್ಕೃತಿಕ ಚಿಹ್ನೆಯಾಗಿದೆ. ಬಂಜಾರ ಅಕಾಡೆಮಿ ಯುವ ಸಮುದಾಯಕ್ಕೆಬಂಜಾರ ಕಲೆ ಸಾಹಿತ್ಯ ಸಂಸ್ಕೃತಿ ಹಾಗೂ ಶಿಕ್ಷಣದ ಕಡೆದ ಜಾಗೃತಿ ಮೂಡಿಸುವ ಉದ್ದೇಶವಾಗಿದೆ ಎಂದು ಹೇಳಿದರು.ಯುವಕರನ್ನು ಜಾಗತಿಕ ಸವಾಲು ಮತ್ತು ಸಾಂಸ್ಕೃತಿಕ ನಾಯಕತ್ವ ವಹಿಸಲು ಸಜ್ಜುಗೊಳಿಸುವುದೇ ನಮ್ಮ ಗುರಿ. ಪ್ರತಿ ತಾಂಡದಿಂದ ಕನಿಷ್ಠ ಇಬ್ಬರು ಜಾಗೃತರಾದರೂ ಅಕಾಡೆಮಿ ಹಾಗೂ ಸರ್ಕಾರದ ಉದ್ದೇಶ ಸಫಲವಾಗಲಿದೆ. ಕಲೆ, ಸಾಹಿತ್ಯ, ಸಂಸ್ಕೃತಿ ವಿಷಯಕ್ಕೆ ವಿದ್ಯಾರ್ಥಿಗಳು ಯುವ ಜನತೆ ಬಂದರೆ ಓದಿನಲ್ಲೂ ಮುಂದಿತ್ತಾರೆ. ದೇಶದ ಸಾಂಸ್ಕೃತಿಕ ಹೆಗ್ಗುರುತಾಗಿ ನಾವು ತಾಜ್ ಮಹಲ್ ಹಾಗೂ ಬಂಜಾರರ ಕಸೂತಿ ವಸ್ತ್ರ ತೊಟ್ಟ ಮಹಿಳೆಯನ್ನು ತೋರಿಸುತ್ತೇವೆ. ಇದು ಬಂಜಾರರ ಕಲೆಗೆ ಸಿಕ್ಕ ಮನ್ನಣೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಜಯರಾಮ್ ನಾಯ್ಕ್ ಮಾತನಾಡಿ, ಬಂಜಾರರು ತಮ್ಮ ಭಾಷೆ ವಸ್ತ್ರ ಸಂಹಿತೆ ಮರೆಯುತ್ತಿರುವ ಹಾಗೂ ಬಂಜಾರ ಭಾಷೆ, ವಸ್ತ್ರ ತೊಟ್ಟರೆ ಅವಮಾನ ಎಂದು ಭಾವಿಸುತ್ತಿರುವ ಈ ಸಂದರ್ಭದಲ್ಲಿ ಬಂಜಾರ ಅಕಾಡೆಮಿ ಈ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.ರಂಗಕರ್ಮಿ ನರೇಶ್ ಮೈಯ ಮಾತನಾಡಿ, ಬಂಜಾರ ಅಕಾಡೆಮಿ ಬಂಜಾರ ಭಾಷೆ ಸಂಸ್ಕೃತಿ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಸುಮಾರು 70ಕ್ಕೂ ಹೆಚ್ಚು ಜನರಿಗೆ ಸಾಂಸ್ಕೃತಿಕ ಸಾಹಿತ್ಯಿಕ ಪ್ರಶಸ್ತಿಗಳನ್ನು ಕೊಡಿಸಿದೆ. ಸಂತ ಸೇವಾಲಾಲ್ ಹೆಸರಿನಲ್ಲಿ 1 ಲಕ್ಷ ಮೊತ್ತದ ಪ್ರಶಸ್ತಿ ಅಧ್ಯಕ್ಷರ ದೂರದೃಷ್ಟಿಯಿಂದ ಸ್ಥಾಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದ ಬಾಲ ನಾಯ್ಕ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷೆ ವರಲಕ್ಷ್ಮಿ, ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಣ್ಣ ನಾಯ್ಕ್, ಸ್ಥಳೀಯ ಮುಖಂಡರಾದ ಲಲಿತಾ ಬಾಯಿ ಮಹದೇವ ನಾಯ್ಕ್, ಶಾಂತಿ ಬಾಯಿ ರವಿ ನಾಯ್ಕ್, ಅಕಾಡೆಮಿ ಸದಸ್ಯರಾದ ಗಿರೀಶ್ ನಾಯ್ಕ ಇತರರು ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 01:
ಕನಕಪುರ ತಾಲೂಕಿನ ಚೌಕಸಂದ್ರ ಗ್ರಾಮದಲ್ಲಿ ಬಂಜಾರ ಅಕಾಡೆಮಿ ವತಿಯಿಂದ ಸಂಸ್ಕೃತಿ, ಕಲೆಯ ಜಾಗೃತಿಗಾಗಿ "ನಮ್ಮ ನಡೆ ತಾಂಡಾ ಕಡೆಗೆ " ಅಭಿಯಾನಕ್ಕೆ ಚಾಲನೆ ನೀಡಲಾಯಿತು.