ದುರ್ಬಲ ವರ್ಗದ ಜನರಿಗಾಗಿ ನಮ್ಮ ಕ್ಲಿನಿಕ್ ಸೇವೆ: ಶಾಸಕ ಶ್ರೀನಿವಾಸ ಮಾನೆ

| Published : Sep 03 2025, 01:01 AM IST

ಸಾರಾಂಶ

ನಮ್ಮ ಕ್ಲಿನಿಕ್ 10ರಿಂದ 20 ಸಾವಿರ ಜನರಿಗೆ ವೈದ್ಯಕೀಯ ಸೇವೆ ನೀಡಲಿದೆ. ಕಲ್ಲಹಕ್ಕಲ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ತಾಲೂಕಾಸ್ಪತ್ರೆ ದೂರ ಆಗಲಿದ್ದು, ಸನಿಹದಲ್ಲಿ ವೈದ್ಯಕೀಯ ಸೇವೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ.

ಹಾನಗಲ್ಲ: ಕೊಳಗೇರಿ ನಿವಾಸಿಗಳು, ದಿನಗೂಲಿ ಕಾರ್ಮಿಕರು ಮತ್ತು ಸಮಾಜದ ಇತರ ದುರ್ಬಲ ವರ್ಗದವರಿಗೆ ಸುಲಭವಾಗಿ ವೈದ್ಯಕೀಯ ಸೇವೆ ಒದಗಿಸಲು ನಮ್ಮ ಕ್ಲಿನಿಕ್ ಆರಂಭಿಸಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಸ್ಥಳೀಯ ಪುರಸಭೆ ವ್ಯಾಪ್ತಿಯ ಕಲ್ಲಹಕ್ಕಲ ಪ್ರದೇಶದಲ್ಲಿ ಆರಂಭಿಸಲಾಗಿರುವ ನಮ್ಮ ಕ್ಲಿನಿಕ್ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಕ್ಲಿನಿಕ್ 10ರಿಂದ 20 ಸಾವಿರ ಜನರಿಗೆ ವೈದ್ಯಕೀಯ ಸೇವೆ ನೀಡಲಿದೆ. ಕಲ್ಲಹಕ್ಕಲ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ತಾಲೂಕಾಸ್ಪತ್ರೆ ದೂರ ಆಗಲಿದ್ದು, ಸನಿಹದಲ್ಲಿ ವೈದ್ಯಕೀಯ ಸೇವೆ ಸಿಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಕ್ಲಿನಿಕ್‌ನಲ್ಲಿ ವೈದ್ಯರು, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಗ್ರೂಪ್ ಡಿ ನೌಕರ ಇರಲಿದ್ದಾರೆ. ನಮ್ಮ ಕ್ಲಿನಿಕ್‌ನಿಂದ ತಾಲೂಕಾಸ್ಪತ್ರೆ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ತಿಳಿಸಿದ ಅವರು, ಸರ್ಕಾರಿ ಸೇವೆ ಸಲ್ಲಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಇಡೀ ರಾಜ್ಯದಲ್ಲಿ 2500 ವೈದ್ಯರ ಕೊರತೆ ಇದೆ. ಪ್ರತಿವರ್ಷ 5ರಿಂದ 6 ಸಾವಿರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣ ಪಡೆದು ಹೊರ ಬರುತ್ತಿದ್ದರೂ ಸರ್ಕಾರಿ ಸೇವೆಗೆ ಮಾತ್ರ ಮನಸ್ಸು ಮಾಡುತ್ತಿಲ್ಲ. ಸರ್ಕಾರಿ ಸೇವೆ ಸಲ್ಲಿಸಲು ಎಂಬಿಬಿಎಸ್ ವೈದ್ಯರು ಮುಂದೆ ಬಂದರೆ ಒಂದೇ ದಿನದಲ್ಲಿ ಆದೇಶ ಕೊಡಿಸುವುದಾಗಿ ಹೇಳಿದರು.ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ನಾಗಪ್ಪ ಸವದತ್ತಿ, ಮಮತಾ ಆರೆಗೊಪ್ಪ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಪರಶುರಾಮ ಖಂಡೂನವರ, ಮಾಜಿ ಉಪಾಧ್ಯಕ್ಷೆ ಶಂಶಿಯಾ ಬಾಳೂರ, ತಾಪಂ ಕೆಡಿಪಿ ಸದಸ್ಯ ಮಹ್ಮದ್‌ಹನೀಫ್ ಬಂಕಾಪೂರ, ಟಿಎಚ್‌ಒ ಡಾ. ಲಿಂಗರಾಜ್ ಕೆ.ಜಿ., ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಸುರೇಶ ನಾಗಣ್ಣನವರ, ರಾಜಕುಮಾರ ಶಿರಪಂತಿ, ಗನಿ ಪಾಳಾ, ಮಾಲತೇಶ ಕಾಳೇರ, ಇರ್ಫಾನ್ ಮಿಠಾಯಿಗಾರ, ಮೌನೇಶ ಕಲಾಲ, ಗೌಸ್‌ಮೊದೀನ್ ತಂಡೂರ ಇದ್ದರು.