ಸಾರಾಂಶ
ಹಾಸನ: ಯಾವುದೇ ತನಿಖೆ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥರಾಗುವುದಿಲ್ಲ. ಪರಿಶುದ್ಧ ಹಾಲು ಹೇಗೆ ಇರುತ್ತದೋ ಅದೆ ರೀತಿ ನಮ್ಮ ಮುಖ್ಯಮಂತ್ರಿಗಳು ಇದ್ದಾರೆ ಎಂದು ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ಸಮರ್ಥಿಸಿದರು.
ಹಾಸನ: ಯಾವುದೇ ತನಿಖೆ ಮಾಡಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪ್ಪಿತಸ್ಥರಾಗುವುದಿಲ್ಲ. ಪರಿಶುದ್ಧ ಹಾಲು ಹೇಗೆ ಇರುತ್ತದೋ ಅದೆ ರೀತಿ ನಮ್ಮ ಮುಖ್ಯಮಂತ್ರಿಗಳು ಇದ್ದಾರೆ ಎಂದು ಲೋಕಸಭಾ ಸದಸ್ಯ ಶ್ರೇಯಸ್ ಎಂ.ಪಟೇಲ್ ಸಮರ್ಥಿಸಿದರು. ನಗರದಲ್ಲಿ ಬುಧವಾರ ಪೌರಕಾರ್ಮಿಕರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಕುರಿತು ಮಾತನಾಡುತ್ತಾ, ಇದೊಂದು ಸುಳ್ಳು ಆರೋಪ ಕ್ಷಣಿಕ ಅಷ್ಟೇ. ಕೊನೆಗೆ ಉಳಿದುಕೊಳ್ಳುವುದೇ ಸತ್ಯ. ಉಚ್ಚ ನ್ಯಾಯಾಲಯ ಕೊಟ್ಟಿರುವ ತೀರ್ಪಿಗೆ ನಾವೆಲ್ಲರೂ ಬದ್ಧರಾಗುತ್ತೇವೆ. ಸಿದ್ದರಾಮಯ್ಯ ಅವರು ಆರೋಪ ಮುಕ್ತವಾಗಿ ಹೊರ ಬರುತ್ತಾರೆ ಎನ್ನುವ ನಂಬಿಕೆ ಜನರಿಗಿದೆ ಎಂದರು.
ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ವಿಪಕ್ಷಗಳ ಬೇಡಿಕೆ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಯಾವ ವಿಷಯಕ್ಕೆ ರಾಜೀನಾಮೆ ಕೊಡಬೇಕು, ಏತಕ್ಕಾಗಿ ಕೊಡಬೇಕು? ಮೊದಲು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನ ಸರಿ ಮಾಡಿಕೊಳ್ಳಲಿ! ಅವರು ಇಲ್ಲಿವರೆಗೂ ಎಷ್ಟು ಹಗರಣ ಮಾಡಿಲ್ಲ? ಎಷ್ಟು ಹಗರಣದಲ್ಲಿ ಭಾಗಿಯಾಗಿಲ್ಲ ? ಎಷ್ಟು ಮುಖ್ಯಮಂತ್ರಿಗಳು ಇಲ್ಲಿವರೆಗೂ ರಾಜೀನಾಮೆ ಕೊಟ್ಟಿದ್ದಾರೆ? ರಾಜೀನಾಮೆ ಅನ್ನುವ ಪ್ರಮೇಯವೇ ಇಲ್ಲ. ಅದೆಲ್ಲ ಶುದ್ಧ ಸುಳ್ಳು. ನಾವೆಲ್ಲ ಶಾಸಕರು, ಸಂಸದರು ಸಿದ್ದರಾಮಯ್ಯ ಸಾಹೇಬರ ಬೆನ್ನಿಗಿದ್ದೇವೆ. ಸಾಬೀತಾದರೆ ತಾನೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಅದು ಸಾಬೀತೆ ಆಗೋದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಶ್ರೇಯಸ್ ಪಟೇಲ್ ನಮ್ಮೆಲ್ಲರ ಮಾರ್ಗದರ್ಶಕರು ನಮ್ಮ ಮುಖ್ಯಮಂತ್ರಿಗಳು. ಅವರು ಬೆಲೆ ತೆರೆವ ಪ್ರಶ್ನೆಯೇ ಇಲ್ಲ. ಈ ಪ್ರಕರಣದ ಆರೋಪದಲ್ಲಿ ಸಿದ್ದರಾಮಯ್ಯ ಎಂಬ ಹೆಸರೇ ಇಲ್ಲ. ಕೋರ್ಟ್ ತನಿಖೆ ಮಾಡಲು ಅಷ್ಟೇ ಅಸ್ತು ನೀಡಿದೆ. ತನಿಖೆ ನಡೆಸಲಿ ಸತ್ಯಾಸತ್ಯತೆ ಹೊರಬರುತ್ತದೆ. ಕಾನೂನಿನ ಮುಂದೆ ನಾವ್ಯಾರೂ ಸತ್ಯವನ್ನು ಮುಚ್ಚಿ ಇಡಲಾಗುವುದಿಲ್ಲ ಎಂದು ಹೇಳಿದರು.