ಸಾರಾಂಶ
ಶ್ರೀ ವಿನಾಯಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಮಹಾಸಭೆ
ಕನ್ನಡಪ್ರಭ ವಾರ್ತೆ ಕೊಪ್ಪನಮ್ಮ ರಾಷ್ಟ್ರ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಸಾಲಿನಲ್ಲಿರುವ ರಾಷ್ಟ್ರಗಳಲ್ಲಿ ನಮ್ಮ ದೇಶ ಒಂದಾಗಲಿದೆ. ಅದಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಬಹಳ ಮುಖ್ಯ. ಪ್ರಸ್ತುತ ದಿನಗಳಲ್ಲಿ ಮಾನವ ಸಂಪನ್ಮೂಲ ಮೊಬೈಲ್-ಟಿವಿ ಮಾಧ್ಯಮಗಳ ಮೂಲಕ ಹಾಳಾಗುತ್ತಿದ್ದಾರೆ ಎಂದು ಲೆಕ್ಕಪರಿಶೋಧಕರಾದ ರವೀಂದ್ರನಾಥ್ ಬಿ.ವಿ ಹೇಳಿದರು.
ಜಯಪುರದ ಶ್ರೀ ವಿನಾಯಕ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ವಾರ್ಷಿಕ ಮಹಾಸಭೆ ಬುಧವಾರ ಕಚೇರಿ ಸಭಾಂಗಣದಲ್ಲಿ ನಡೆದಿದ್ದು, ಸಭೆಯಲ್ಲಿ ಮಾತನಾಡಿ ಇದನ್ನು ಕಡಿವಾಣ ಹಾಕುವ ಮೂಲಕ ನಮ್ಮ ದೇಶ ಅಭಿವೃದ್ಧಿ ಪಥಕ್ಕೆ ಹೋಗಬೇಕು. ಅವಶ್ಯಕತೆಗಿಂತ ಹೆಚ್ಚಾಗಿ ಅನಾವಶ್ಯಕ ವಾಗಿ ಮೊಬೈಲ್-ಟಿವಿಗಳನ್ನು ಬಳಸುತ್ತಿದ್ದೇವೆ ಇದನ್ನು ನಿಯಂತ್ರಿಸಬೇಕು. ಇದರ ಜೊತೆಗೆ ದೇಹಕ್ಕೆ ಅನಾವಶ್ಯಕವಾದ ಜಂಕ್ ಫುಡ್ ಆಹಾರವನ್ನು ನಿಯಂತ್ರಿಸಿ ಆರೋಗ್ಯಕರ ಆಹಾರವನ್ನು ಸೇವಿಸಬೇಕೆಂದು ಹೇಳಿದರು.ಒಂದು ಸಣ್ಣ ಗ್ರಾಮದಲ್ಲಿ ಒಂದು ಸಂಸ್ಥೆ ೨೯ ಲಕ್ಷ ಲಾಭ ಬಂದಿದೆ ಎಂದರೆ ಅದು ದೊಡ್ಡ ಸಾಧನೆ. ಸಂಸ್ಥೆ ಎಂದರೆ ಸಣ್ಣ ಪುಟ್ಟ ಲೋಪ ದೋಷಗಳು ಬರುವುದು ಸಹಜ, ಮುಂದಿನ ವರ್ಷಗಳಲ್ಲಿ ಈ ರೀತಿ ಲೋಪದೋಷಗಳು ಬಾರದಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಿಬ್ಬಂದಿ, ಅಧ್ಯಕ್ಷ ಹಾಗೂ ನಿರ್ದೇಶಕರು ಪ್ರಯತ್ನಿಸಬೇಕು. ಸಂಸ್ಥೆ ೧೫ ವರ್ಷ ಪೂರೈಸಿದ್ದು ಪ್ರತಿ ವರ್ಷ ಎ ದರ್ಜೆಯನ್ನು ಹೊಂದಿರುವುದು ಒಂದು ದೊಡ್ಡ ಸಾಧನೆ. ಸಂಸ್ಥೆ ಬೆಳವಣಿಗೆಗೆ ಸಾಲಗಾರರು ಮುಖ್ಯಪಾತ್ರ ವಹಿಸುತ್ತಾರೆ. ಸಾಲಗಾರರಿಂದ ಬರುವಂತಹ ಲಾಭಾಂಶದಿಂದ ನೌಕರರಿಗೆ ಸಂಬಳ, ಷೇರುದಾರರಿಗೆ ಲಾಭಾಂಶ ಹಾಗೂ ಕಚೇರಿ ನಿರ್ವಹಣೆ ನಡೆಸಬಹುದು ಎಂದರು.ಸಭೆಯ ಅಧ್ಯಕ್ಷತೆ ವಹಿಸಿಕೊಂಡಿದ್ದಂತಹ ಅಧ್ಯಕ್ಷ ಸುಬ್ಬರಾಜು ಎಂ.ವಿ ಮಾತನಾಡಿ ವಿನಾಯಕ ಸೌಹಾರ್ದ ೨೦೦೯ರಲ್ಲಿ ಪ್ರಾರಂಭವಾಗಿದ್ದು, ಪ್ರಸ್ತುತ ಸಾಲಿಗೆ ಹದಿನೈದು ವರ್ಷ ಪೂರೈಸಿದೆ. ಪ್ರಸ್ತುತ ಸಾಲಿನಲ್ಲಿ೨೯,೭೨,೩೦೯.೦೦ ರು. ನಿವ್ವಳ ಲಾಭ ಗಳಿಸಿದ್ದು, ಈ ಸಾಧನೆಗೆ ಷೇರು ದಾರರು, ನಿರ್ದೇಶಕ ಮಂಡಳಿ ಹಾಗೂ ನೌಕರರ ಸಹಕಾರ ಬಹಳ ಮುಖ್ಯವಾಗಿದೆ ಎಂದರು.ಸಭೆಯಲ್ಲಿ ಉಪಾಧ್ಯಕ್ಷರಾದ ಜ್ಯೋತಿ, ನಿರ್ದೇಶಕರಾದ ಚಂದ್ರಶೇಖರ್, ಗೋಪಾಲ್, ನಾಗರಾಜ್, ಸುಬ್ರಹ್ಮಣ್ಯ, ಪ್ರಭಾಕರ, ಪಾಂಡುರಂಗ, ಸುಮಂಗಲ, ವಿಷಯ ಪರಿಣಿತ ನಿರ್ದೇಶಕರಾದ ಕೆ.ಜಿ ಪರಮೇಶ್ವರ ಶಾಸ್ತ್ರಿ, ಸೌಹಾರ್ದದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಣಿರಾಜ್ ಹೆಬ್ಬಾರ್, ಸಿಬ್ಬಂದಿ ಶ್ವೇತ, ಸುಚಿತ್ರ, ರಾಜುಮೂರ್ತಿ ಇದ್ದರು.