ಸಾರಾಂಶ
ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆನಮ್ಮ ದೇಶ ವ್ಯಸನ ಮುಕ್ತ ರಾಷ್ಟ್ರವಾಗಬೇಕು ಎಂದು ಲಕ್ಕವಳ್ಳಿ ಠಾಣೆಯ ಪೋಲೀಸ್ ಉಪ ನಿರೀಕ್ಷಕ ಸಿಕಂದರ್ ಪಾಷ
ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ತರೀಕೆರೆ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ, ಚಿಕ್ಕಮಗಳೂರು ಇವರ ಸಹಯೋಗದೊಂದಿಗೆ ಲಕ್ಕವಳ್ಳಿ ವಲಯದ ಗ್ರಾಮ ಜ್ಯೋತಿ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟನೆ ಮಾತನಾಡಿದರು.ಕಲಿಯುವ ವಯಸ್ಸಿನಲ್ಲಿ ಅನೇಕ ದುಶ್ಚಟಗಳಿಗೆ ಬಲಿಯಾಗಿ ಅನೇಕ ಯುವಕರು ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೆಲವೊಂದು ಸಿನಿಮಾ ತಾರೆಯರ ಜಾಹೀರಾತಿನ ಆಕರ್ಷಣೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ದುಶ್ಚಟಕ್ಕೆ ಬಲಿ ಕೊಡುತ್ತಿದ್ದಾರೆ ಎಂದು ವಿಷಾದಿಸಿದರು. ವಿದ್ಯಾರ್ಥಿಗಳ ಜೀವನ ಹಸನಾಗಬೇಕು ಅದಕ್ಕೆ ನಮ್ಮ ದೇಶ ವ್ಯಸನ ಮುಕ್ತ ರಾಷ್ಟ್ರವಾಗಬೇಕು ಎಂದು ತಿಳಿಸಿದರು.
ಯೋಜನೆಯ ತಾಲೂಕು ಯೋಜನಾಧಿಕಾರಿಗಳು ಕುಸುಮಾಧರ್ ಮಾತನಾಡಿ ದುಶ್ಚಟಗಳ ಮುಕ್ತ ಸಮಾಜ ಗಾಂಧೀಜಿ ಯವರ ಗುರಿಯಾಗಿತ್ತು. ಇದನ್ನು ಸಾಕಾರಗೊಳಿಸುವ ಬಗ್ಗೆ ಪೂಜ್ಯರು ಚಿಂತನೆ ಮಾಡಿ ಜನಜಾಗೃತಿ ವೇದಿಕೆಯಡಿ ಅನೇಕ ಮಧ್ಯವರ್ಜನ ಶಿಬಿರಗಳನ್ನು ಏರ್ಪಡಿಸಿ ಸಾವಿರಾರು ಮಂದಿ ದುಶ್ಚಟಗಳಿಂದ ದೂರವಾಗಿ ಹೊಸ ಜೀವನ ಪ್ರಾರಂಭ ಮಾಡಿದ್ದಾರೆ. ಯೋಜನೆಯಿಂದ ಸ್ವಾಸ್ಥ್ಯ ಸಂಕಲ್ಪ ಮಾದಕ ವಸ್ತುಗಳ ವಿರೋಧಿ ದಿನ ತಂಬಾಕು ಮುಕ್ತ ದಿನಾಚರಣೆಯ ಅನೇಕ ಕಾರ್ಯಕ್ರಮ ಮಾಡಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.ಲಕ್ಕವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಓಂ ಪ್ರಕಾಶ್ ಮಾತನಾಡಿ, ತಂಬಾಕು ಒಂದು ಚಿಕ್ಕ ಸಸ್ಯದಿಂದ ಉತ್ಪತ್ತಿಯಾಗುತ್ತದೆ. ಇದರಲ್ಲಿ ಅನೇಕ ರಾಸಾಯನಿಕ ಪದಾರ್ಥ ಉಪಯೋಗಿಸಿ ತಂಬಾಕು ಪದಾರ್ಥ ಗಳನ್ನು ಮಾಡಲಾಗುತ್ತದೆ. ಇದನ್ನು ಜನ ಸೇವಿಸುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಾರೆ. ಅಲ್ಲದೆ ಇದರಲ್ಲಿರುವ ನಿಕೊಟಿನ್ ಎಂಬ ರಾಸಾಯನಿಕದಿಂದ ಒಂದು ಬಾರಿ ಸೇವನೆ ಮಾಡಿದರೂ ಮತ್ತೆ ಮತ್ತೆ ಸೇವಿಸಬೇಕೆಂಬ ಆಸೆ ಹುಟ್ಟುತ್ತದೆ. ಇದರಿಂದ ದೂರವಿದ್ದು ವಿದ್ಯಾರ್ಥಿಗಳು ಆರೋಗ್ಯ ಕಾಪಾಡಿಕೊಂಡು ಮುಂದೆ ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ತಿಳಿಸಿದರು.ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮೂಡಲ ಗಿರಿಯಪ್ಪ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಸಮಾಜ ಮುಖಿ ಕಾರ್ಯಕ್ರಮ ನಡೆಸುತ್ತಿದೆ. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳು ನಿಮ್ಮ ಅಮೂಲ್ಯವಾದ ಜೀವನದಲ್ಲಿ ನಿಮ್ಮ ತಂದೆ ತಾಯಿಯನ್ನು ನೋಡಿಕೊಳ್ಳುವ ಮೂಲಕ ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಕರೆನೀಡಿದರು.ಶಾಲೆ ಕಮಿಟಿ ಅಧ್ಯಕ್ಷ ಸಂಜೀವ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್ಯಕ್ರಮ ಎಲ್ಲರಿಗೂ ಉಪಯೋಗ ವಾಗಿದೆ ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿ ಕೋಂಡು, ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ ತಲುಪಿಸಿ ಎಂದು ಸಲಹೆ ಮಾಡಿದರು.ಜಿಲ್ಲಾ ಜನಜಾಗೃತಿ ಸದಸ್ಯರಾದ ರಮೇಶ್, ಶಾಲಾ ಕಮಿಟಿ ಕಾರ್ಯದರ್ಶಿ ಬ್ರಹ್ಮರಾಜು, ಸಹ ಕಾರ್ಯದರ್ಶಿ ರಾಜ ಶೇಖರ್, ಶಾಲೆ ಶಿಕ್ಷಕರು ವೃಂದದವರು ವಲಯದ ಮೇಲ್ವಿಚಾರಕರು ಸುರೇಶ್, ಜ್ಞಾನವಿಕಾಸ ಸಮನ್ವಯಾದಿಕಾರಿ ನಂದಿನಿ, ಸೇವಾ ಪ್ರತಿನಿಧಿಗಳು ಸಂಗಮ್ಮ, ಶಾಲೆಯ ಮಕ್ಕಳು ಉಪಸ್ಥಿತರಿದ್ದರು.ಫೋಟೋ ಇದೆಃ
ತರೀಕೆರೆ ಸಮೀಪದ ಲಕ್ಕವಳ್ಳಿ ಗ್ರಾಮಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟನೆಯನ್ನು ಪೊಲೀಸ್ ಉಪ ನಿರೀಕ್ಷಕ ಸಿಕಂದರ್ ಪಾಷ ನೆರವೇರಿಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಕುಸುಮಾಧರ್ ಮತ್ತಿತರರು ಇದ್ದರು.