ಸಾರಾಂಶ
ವಿಶ್ವ ಶಾಂತಿಗೆ ಜಾತಿ, ಮತ, ಬೇಧವಿಲ್ಲದೆ ಯೋಗ ಧ್ಯಾನದಲ್ಲಿ ನೂರಾರು ಜನರು ಭಾಗವಹಿಸಿರುವುದು ಹೆಮ್ಮೆಯ ವಿಷಯ. ಯೋಗ ಕೇವಲ ಒಂದು ದೈಹಿಕ ವ್ಯಾಯಾಮ ಅಲ್ಲ. ಅದು ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸಿ ನಮ್ಮ ದೇಹ ಮತ್ತು ಮನಸ್ಸೆರಡನ್ನೂ ಸದಾ ಉಲ್ಲಾಸದಾಯಕವಾಗಿರಿಸುತ್ತದೆ.
ಬುದ್ಧ- ಬಸವ- ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಧ್ಯಾನಕೂಟ
ಕೆ.ಆರ್.ಪೇಟೆ: ನಾವು ಮಾಡಿರುವ ಕರ್ಮಗಳು ನಮ್ಮನ್ನು ಬಿಡದೆ ಕಾಡುತ್ತವೆ. ಅದರ ಫಲ ತಿನ್ನದೆ ಕರ್ಮ ಹೋಗುವುದಿಲ್ಲ ಎಂದು ಸಂತೋಷ್ ಗುರೂಜಿ ನುಡಿದರು.ಪಟ್ಟಣದ ಹೊರವಲಯದ ಹೌಸಿಂಗ್ ಬೋರ್ಡ್ ಕಾಲೋನಿಯ ಬುದ್ಧ- ಬಸವ- ಅಂಬೇಡ್ಕರ್ ಯೋಗ ಕೇಂದ್ರದಲ್ಲಿ ಯೋಗಪಟುಗಳಿಗೆ ಆಯೋಜಿಸಿದ್ದ ಧ್ಯಾನ ಕೂಟವನ್ನು ಉದ್ದೇಶಿಸಿ ಮಾತನಾಡಿ, ಮನುಷ್ಯನಲ್ಲಿ ನಕಾರಾತ್ಮಕ ಆಲೋಚನೆಗಳು ಸದಾ ಬರುತ್ತವೆ. ಶ್ರೇಷ್ಠ ಚಿಂತನೆಗಳಿಂದ ಸರ್ವರಿಗೂ ಒಳಿತಾಗಲಿದೆ ಎಂದರು.
ನಮ್ಮ ಹಿರಿಯರು ‘ಬಹು ಜನ ಹಿತಾಯ, ಬಹು ಜನ ಸುಖಾಯ’ ಎನ್ನುವ ಬದುಕಿನ ಮೂಲ ಮಂತ್ರವನ್ನು ಮಾನವ ಕುಲಕ್ಕೆ ಹೇಳಿಕೊಟ್ಟರು. ‘ವಸುದೈವ ಕುಟುಂಬಂ’ ಎನ್ನುವ ಭಾರತೀಯರ ಬದುಕಿನ ಮೂಲ ಮಂತ್ರ ವಿಶ್ವಕ್ಕೆ ಮಾದರಿಯಾಗಬೇಕು. ಜಾತಿ ಮತ್ತು ಧರ್ಮ ರಹಿತ ಸಮ ಸಮಾಜ ನಿರ್ಮಾಣದ ಪರಿಕಲ್ಪನೆಯ ಮೇಲೆ ರೂಪಿತವಾಗಿರುವ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಚಿಂತನೆಗಳಿಂದ ಸಮಾಜಕ್ಕೆ ಒಳಿತಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಯೋಗ ಗುರು ಎಸ್.ಎಂ.ಅಲ್ಲಮಪ್ರಭು ಮಾತನಾಡಿ, ವಿಶ್ವ ಶಾಂತಿಗೆ ಜಾತಿ, ಮತ, ಬೇಧವಿಲ್ಲದೆ ಯೋಗ ಧ್ಯಾನದಲ್ಲಿ ನೂರಾರು ಜನರು ಭಾಗವಹಿಸಿರುವುದು ಹೆಮ್ಮೆಯ ವಿಷಯ. ಯೋಗ ಕೇವಲ ಒಂದು ದೈಹಿಕ ವ್ಯಾಯಾಮ ಅಲ್ಲ. ಅದು ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸಿ ನಮ್ಮ ದೇಹ ಮತ್ತು ಮನಸ್ಸೆರಡನ್ನೂ ಸದಾ ಉಲ್ಲಾಸದಾಯಕವಾಗಿರಿಸುತ್ತದೆ. ಯೋಗದ ಮೂಲಕ ಆಧ್ಯಾತ್ಮಿಕವಾಗಿ ಭಾರತವನ್ನು ಬಲಿಷ್ಠವಾಗಿ ಕಟ್ಟಬೇಕು ಎಂದು ಹೇಳಿದರು. ಬುದ್ಧನ ಮೈತ್ರಿ ಧ್ಯಾನ, ಆನ ಪಾನಸತಿ ಧ್ಯಾನಗಳನ್ನು ಅಲ್ಲಮ ಪ್ರಭು ನಡೆಸಿಕೊಟ್ಟರು. ತಾಲೂಕಿನಲ್ಲಿಯೇ ಪ್ರಥಮವಾಗಿ ಕಾಶಿ ಸ್ಫಟಿಕ ಲಿಂಗ ದರ್ಶನ ಮತ್ತು ಸಾರ್ವಜನಿಕರಿಂದ ಸ್ಪರ್ಶ ಮಾಡಿಸಲಾಯಿತು.
ಯೋಗ ಧ್ಯಾನ ಕೂಟದಲ್ಲಿ ಶಿಕ್ಷಕರಾದ ಅಣ್ಣಯ್ಯ, ಧನೇಂದ್ರ ಗೌಡ, ಕೆಂಬಾರೆ ಗೌಡ, ಶಂಕರ್, ಮಂಜುನಾಥ, ಶಿಕ್ಷಕಿಯರಾದ ಕುಮಾರಿ, ಯಮುನಾ, ಸುಲೋಚನಾ, ಶ್ರೀಮತಿ ಕೊಣನೂರು, ಅರುಣ್, ಬೋಜೇಗೌಡ, ಸೊಸೈಟಿ ಮಂಜು ತೊಳಸಿ, ಕೆಂಚಪ್ಪಗೌಡ ಉಪಸಿತರಿದ್ದರು.