ಕ್ಷೇತ್ರದ ಬಡ ಹಾಗೂ ವಸತಿ ರಹಿತ ಕುಟುಂಬಗಳ ಹಿತ ಕಾಯುವುದು ನಮ್ಮ ಸರ್ಕಾರದ ಮತ್ತು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.
ಶಿಗ್ಗಾಂವಿ: ಕ್ಷೇತ್ರದ ಬಡ ಹಾಗೂ ವಸತಿ ರಹಿತ ಕುಟುಂಬಗಳ ಹಿತ ಕಾಯುವುದು ನಮ್ಮ ಸರ್ಕಾರದ ಮತ್ತು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯ, ಶಿಗ್ಗಾಂವಿ ಹಾಗೂ ಕರ್ನಾಟಕ ಕೊಳಚೆಗೇರಿ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಫಲಾನುಭವಿಗಳಿಗೆ ಇ-ಆಸ್ತಿ ಉತಾರ, ಹಕ್ಕುಪತ್ರ ವಿತರಣೆ ಹಾಗೂ ಎಸ್‌ಎಫ್‌ಸಿ ವಿಶೇಷ ಅನುದಾನದಡಿ ವಾರ್ಡ್ ನಂ. ೪ ರಲ್ಲಿ ರಸ್ತೆ ಮತ್ತು ಚರಂಡಿ ಸುಧಾರಣೆ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಆಶ್ರಯ ಪ್ಲಾಟ್ ಹಾಗೂ ವಿವಿಧ ಯೋಜನೆಯಡಿ ಮನೆ ನಿರ್ಮಿಸಿಕೊಂಡು ದಶಕಗಳಿಂದ ಹಕ್ಕುಪತ್ರ ಹಾಗೂ ಉತಾರ ಇಲ್ಲದೆ ವಂಚಿತರಾಗಿದ್ದ ಬಡ ಕುಟುಂಬಗಳಿಗೆ ಅಧಿಕೃತ ದಾಖಲೆಗಳನ್ನು ವಿತರಿಸುತ್ತಿದ್ದೇನೆ.ಹಕ್ಕುಪತ್ರ ಹಾಗೂ ಇ-ಸ್ವತ್ತು ವಿತರಣೆ: ಜಿ+೧ ಉಚಿತ ಮನೆಗಳ ಯೋಜನೆಗೆ ಬೆಂಬಲ ನೀಡಿದ ೧೮೬ ಫಲಾನುಭವಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿ ಋಣ ತೀರಿಸಲಾಗಿದೆ. ಆಶ್ರಯ ಪ್ಲಾಟ್‌ನಲ್ಲಿ ವರ್ಷಗಳಿಂದ ಮೂಲಸೌಕರ್ಯವಿಲ್ಲದೆ ವಾಸಿಸುತ್ತಿದ್ದ ೩೮೫ ಕುಟುಂಬಗಳ ಪೈಕಿ, ತಾಲೂಕಿನಲ್ಲಿ ಇದುವರೆಗೆ ಒಟ್ಟು ೮,೦೦೦ ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. ಶಿಗ್ಗಾಂವಿ ಪಟ್ಟಣ ಒಂದರಲ್ಲೇ ಸುಮಾರು ೨,೦೦೦ ಮನೆಗಳಿಗೆ ಹಕ್ಕುಪತ್ರ ಹಾಗೂ ನಿವೇಶನ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಕಂದಾಯ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದ ೫೭೦ ಕುಟುಂಬಗಳಿಗೆ ಹಾಗೂ ಮೌಲಾಲಿ ಗುಡ್ಡದ ನಿವಾಸಿಗಳಿಗೆ ಇ-ಸ್ವತ್ತು ಮತ್ತು ಉತಾರ ನೀಡಲಾಗಿದೆ. ಆಶ್ರಯ ಪ್ಲಾಟ್‌ನ ೩೯ ಕುಟುಂಬಗಳ ನಿವೇಶನ ಸಮಸ್ಯೆಗೆ ಸೂಕ್ತ ಪ್ಲಾನ್ ರೂಪಿಸಿ ಸಿಸಿ ರಸ್ತೆ ನಿರ್ಮಿಸಿಕೊಡಲಾಗುವುದು. ಪ್ರದೇಶದ ಬೆಳಕಿಗಾಗಿ ಎರಡು ಹೈಮಾಸ್ಟ್ ದೀಪಗಳನ್ನು ಮಂಜೂರು ಮಾಡಲಾಗಿದೆ. ಲಿಂಗಮುದ್ರೇಶ್ವರ ಮತ್ತು ಬಂಡಾರಕರ ಒಡೆಯ ದೇವಸ್ಥಾನದ ಜಾಗದ ಉತಾರ ಸಮಸ್ಯೆಯನ್ನು ಬಗೆಹರಿಸಿ, ಅಭಿವೃದ್ಧಿಗೆ ರು.೧೦ ಲಕ್ಷ ಅನುದಾನ ಒದಗಿಸಲಾಗಿದೆ. ಕೋಟಿ ೨೦ ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳು ಆರಂಭಗೊಳ್ಳುತ್ತಿದ್ದು, ಶೀಘ್ರದಲ್ಲೇ ೨ ಕೋಟಿ ವೆಚ್ಚದ ಮೂಲಸೌಕರ್ಯ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.ಕ್ಷೇತ್ರದ ಬಡ ಕುಟುಂಬಗಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಈವರೆಗೆ ನೇರವಾಗಿ ಸುಮಾರು ರು.೧,೦೦೦ ಕೋಟಿ ತಲುಪಿದೆ. ಸಾರ್ವಜನಿಕ ಸಾರಿಗೆಗಾಗಿ ೧೫ ಹೊಸ ಬಸ್‌ಗಳನ್ನು ತರಲಾಗಿದೆ. ೫ ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಹಾಗೂ ಪ್ರತಿಯೊಂದು ವಾರ್ಡನಲ್ಲಿ ಸ್ಥಾಪಿಸುವ ''''''''ಭಾರತ್ ಜೋಡೋ'''''''' ಯುವ ಸಂಘಗಳಿಗೆ ತಲಾ ರು. ೧೦ ಲಕ್ಷ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಸದಸ್ಯ ಅಬ್ದುಲ ಕರೀಂ ಮೊಗಲಲ್ಲಿ ಮಾತನಾಡಿದರು. ೨೦೦ ಅರ್ಹ ಫಲಾನುಭವಿಗಳಿಗೆ ಅಧಿಕೃತವಾಗಿ ಹಕ್ಕುಪತ್ರ ಹಾಗೂ ಇ-ಆಸ್ತಿ ಉತಾರಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಪ್ರಮುಖರಾದ ಗುಡ್ಡಪ್ಪ ಜಲದಿ, ಎಸ್.ಎಫ್.ಮಣಕಟ್ಟಿ, ಅದ್ಬುಲಕರೀಂ ಮೊಗಲಳ್ಳಿ, ಮುಕ್ತಿಯಾರ ತಿಮ್ಮಾಪೂರ, ಗೌಸಖಾನ ಮುನಸಿ, ವಸಂತಾ ಬಾಗೂರ, ಪುರಸಭೆ ಮುಖ್ಯಾಧಿಕಾರಿ, ರವೀಂದ್ರ ಬಾಗಲಕೋಟಿ, ಮುನ್ನಾ ಲಕ್ಷ್ಮೇರ, ಚಂದ್ರು ಕೊಡ್ಲಿವಾಡ, ಬಸವರಾಜ ರಾಗಿ, ಅಣ್ಣಪ್ಪ ಲಮಾಣಿ, ಎ.ಎಂ.ಪಟ್ಟೇಕರ, ಶಿವಾನಂದ ದೇವಗೇರಿ, ಜಾವೇದ ನಿರಲಗಿ, ಭಾಷಾ ಶ್ಯಾಬಾಳ, ಮಲ್ಲಮ್ಮ ಸೋನಕಟ್ಟಿ ಉಪಸ್ಥಿತರಿದ್ದರು. ೨೦೦ ಅರ್ಹ ಫಲಾನುಭವಿಗಳಿಗೆ ಅಧಿಕೃತವಾಗಿ ಹಕ್ಕುಪತ್ರ ಹಾಗೂ ಇ-ಆಸ್ತಿ ಉತಾರಗಳನ್ನು ವಿತರಿಸಲಾಯಿತು.