ಪ್ರಕೃತಿಯ ಮೇಲೆ ನಮ್ಮ ಭವಿಷ್ಯ ನಿಂತಿದೆ

| Published : Jan 01 2024, 01:15 AM IST

ಸಾರಾಂಶ

ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ, ಮಗುವೆಂದು ರಕ್ಷಿಸಿ, ಸ್ನೇಹಿತರಂತೆ ಬೆಂಬಲಿಸಿ, ಪ್ರಕೃತಿಯ ಕೊಡುಗೆಯ ಮೇಲೆ ನಮ್ಮ ಬದುಕಿನ ಭವಿಷ್ಯ ನಿಂತಿದೆ

ಕನ್ನಡಪ್ರಭ ವಾರ್ತೆ ಹಾವೇರಿ

ಪ್ರಕೃತಿಯನ್ನು ತಾಯಿಯಂತೆ ಪೂಜಿಸಿ, ಮಗುವೆಂದು ರಕ್ಷಿಸಿ, ಸ್ನೇಹಿತರಂತೆ ಬೆಂಬಲಿಸಿ, ಪ್ರಕೃತಿಯ ಕೊಡುಗೆಯ ಮೇಲೆ ನಮ್ಮ ಬದುಕಿನ ಭವಿಷ್ಯ ನಿಂತಿದೆ ಎಂದು ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಸ್ಥಳೀಯ ಹೊಸಮಠದಲ್ಲಿ ಪೀಪಲ್ ಫಾರ್ ಫಾರೆಸ್ಟ್ ಮತ್ತು ವೈಲ್ಡ್ ಲೈಫ್ ಕನ್ಸರ್ವೆಶನ್ ಆಫ್ ಕರ್ನಾಟಕ ಉತ್ತರ ವಿಭಾಗದ ಸಂಶೋಧನಾ ಕೇಂದ್ರದ ಜಿಲ್ಲಾ ಕಚೇರಿ ಉದ್ಘಾಟನೆ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಈ ಭೂಮಿಯ ಮೇಲೆ ಬದುಕು ಸಾಗಿಸುವ ಹಕ್ಕು ಮಾನವರಿಗಷ್ಟೇ ಅಲ್ಲ. ಸಕಲ ಸಸ್ಯಗಳಿಗೂ, ಪ್ರಾಣಿಗಳಿಗೂ ಇದೆ ಎಂಬುದನ್ನು ಮರೆಯುವಂತಿಲ್ಲ ಎಂದರು.

ಡಾ. ಮಾಧುರಿ ದೇವಧರ ಮಾತನಾಡಿ, ನಮಗಿರುವ ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ. ಪರಿಸರ ರಕ್ಷಣೆ ಮಾಡದ್ದರಿಂದ ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ಮೂಲ ಬೀಜಗಳನ್ನು ಕಳೆದುಕೊಂಡು ಹೈಬ್ರೀಡ್ ಬೀಜಗಳಿಗೆ ಶರಣಾಗಿರುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಒಂದು ವರ್ಷಕ್ಕಾಗಿ ಯೋಜಿಸುವುದಾದರೆ ಧಾನ್ಯವನ್ನು ಬೆಳೆಸು, ಒಂದು ದೇಶಕ್ಕಾಗಿ ಯೋಜಿಸುವುದಾದರೆ ಗಿಡ ಮರಗಳನ್ನು ಬೆಳೆಸಬೇಕು. ಒಂದು ಜೀವಮಾನಕ್ಕಾಗಿ ಯೋಜಿಸುವುದಾದರೆ ಸೂಕ್ತ ಶಿಕ್ಷಣ ನೀಡಬೇಕು ಎಂದರು.

ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮೀಜಿ ಮಾತನಾಡಿ, ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವಂತೆ ನಮ್ಮ ಪರಿಸರ ರಕ್ಷಣೆ ಆಗಿದೆ. ನಮ್ಮ ಉಸಿರು ಎಷ್ಟು ಮುಖ್ಯವೋ, ಪರಿಸರ ಉಸಿರು ಅಷ್ಟೇ ಮುಖ್ಯ. ಪರಿಸರಕ್ಕೆ ಎಲ್ಲವನ್ನೂ ಬದಲಾವಣೆ ಮಾಡುವ ಶಕ್ತಿ ಇದೆ ಎಂದರು.

ಸಮಾಜ ಸೇವಕ ನವೀನ ಮರಗಿ, ರಾಷ್ಟ್ರ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಂಗಾ ಕೋರಿ ಮಾತನಾಡಿದರು.

ಪ್ರಾಚಾರ್ಯ ಲಿಂಗರಾಜ, ಶ್ರೀಶೈಲ, ಹರ್ಷಿತಾ, ಸುಮಾ ಪುರದ ಉಪಸ್ಥಿತರಿದ್ದರು. ಸುವಣಾ ಸಿರಸಪ್ಪನವರ ಪರಿಸರ ಗೀತೆ ಹಾಡಿದರು. ವಕ್ತಾರ ಶಿವಪ್ಪ ಬಳಲಕೊಪ್ಪದ ಸ್ವಾಗತಿಸಿದರು. ಕಾರ್ಯನಿರ್ವಾಹಕ ನಿರ್ದೇಶಕ ದತ್ತಾ ಸರಾಫ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ದಾನಪ್ಪನವರ ಕಾರ್ಯಕ್ರಮ ನಿರೂಪಿಸಿದರು.