ಕಾರಜೋಳರ ಗೆಲ್ಲಿಸುವುದೇ ನಮ್ಮ ಗುರಿ: ಚಂದ್ರಪ್ಪ

| Published : Apr 04 2024, 01:01 AM IST

ಕಾರಜೋಳರ ಗೆಲ್ಲಿಸುವುದೇ ನಮ್ಮ ಗುರಿ: ಚಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಕ್ಷೇತ್ರದ ಚಿತ್ರದುರ್ಗ ಬಿಜೆಪಿ ಟಿಕೆಟ್ ಹಂಚಿಕೆ ಸಂಬಂಧಿಸಿದಂತೆ ಉದ್ಭವವಾಗಿದ್ದ ಎಲ್ಲ ಬಂಡಾಯ ಹಾಗೂ ಗೊಂದಲಗಳು ನಿವಾರಣೆಯಾಗಿದ್ದು, ಒಂದಾಗಿ ಹೋಗುವ ಹಾಗೂ ಮೋದಿ ಅವರ ಕೈ ಬಲಪಡಿಸುವ ಎಂಬ ನಿರ್ಣಯಕ್ಕೆ ಬರಲಾಗಿದೆ.

ಚಿತ್ರದುರ್ಗ: ಲೋಕಸಭೆ ಕ್ಷೇತ್ರದ ಚಿತ್ರದುರ್ಗ ಬಿಜೆಪಿ ಟಿಕೆಟ್ ಹಂಚಿಕೆ ಸಂಬಂಧಿಸಿದಂತೆ ಉದ್ಭವವಾಗಿದ್ದ ಎಲ್ಲ ಬಂಡಾಯ ಹಾಗೂ ಗೊಂದಲಗಳು ನಿವಾರಣೆಯಾಗಿದ್ದು, ಒಂದಾಗಿ ಹೋಗುವ ಹಾಗೂ ಮೋದಿ ಅವರ ಕೈ ಬಲಪಡಿಸುವ ಎಂಬ ನಿರ್ಣಯಕ್ಕೆ ಬರಲಾಗಿದೆ. ಬುಧವಾರ ಬೆಳಗ್ಗೆ ಶಾಸಕ ಎಂ.ಚಂದ್ರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಅಭ್ಯರ್ಥಿ ಗೋವಿಂದ ಕಾರಜೋಳ ಉಪಹಾರ ಸೇವಿಸುತ್ತ ಹಳೆಯ ನೆನಪುಗಳ ಮೆಲಕು ಹಾಕಿದರು. ಪಕ್ಷ ವರಿಷ್ಠರು ಕೈಗೊಂಡಿರುವ ತೀರ್ಮಾನಗಳ ಗೌರವಿಸೋಣ ಎಂದರು.

ಉಭಯ ಕುಶಲೋಪರಿ ಮಾತುಕತೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಶಾಸಕ ಎಂ.ಚಂದ್ರಪ್ಪ ಹಾಗೂ ಅವರ ಪುತ್ರ ರಘುಚಂದನ್ ಇಬ್ಬರೂ ಬೆಂಬಲವಾಗಿ ನಿಂತಿದ್ದಾರೆ ಎಂದರು.

ರಘುಚಂದನ್ ಯುವಕ, ಆಶಾವಾದಿ, ಸತತ ಹೋರಾಟ ಮಾಡಿಕೊಂಡು ಬಂದವರು. ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಯಾವುದೋ ಲೆಕ್ಕಾಚಾರದಲ್ಲಿ ನನಗೆ ಟಿಕೆಟ್ ನೀಡಿದರು. ಮೊದಲೇ ನಾನು ಬೇಡ ಎಂದು ಹೇಳಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ನಾಯಕರು, ನಾನು ಯಾರ ಮಾತು ಮೀರುವುದಿಲ್ಲವೋ ಅವರು ನಿಲ್ಲಲೇಬೇಕು ಎಂದಾಗ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ನಾನು ಚಂದ್ರಪ್ಪ ಒಂದೇ ತಾಟಿನಲ್ಲಿ ಉಂಡವರು. ಕೆಲ ಪರಿಸ್ಥಿತಿ ಹಾಗೂ ಆವೇಶದಲ್ಲಿ ಕೆಲ ಮಾತುಗಳು ಬರುತ್ತವೆ. ಅವನ್ನು ಯಾರೂ ಮನಸ್ಸಿಗೆ ತೆಗೆದುಕೊಳ್ಳುವುದು ಬೇಡ ಎಂದು ಮನವಿ ಮಾಡಿದರು.

ಶಾಸಕ ಎಂ.ಚಂದ್ರಪ್ಪ ಮಾತನಾಡಿ, ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಅನಿವಾರ್ಯವಾಗಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ನನ್ನ ಮಗನಿಗೆ ಇನ್ನೂ ವಯಸ್ಸಿದೆ. ಹಾಗಾಗಿ ಈ ಚುನಾವಣೆಯಲ್ಲಿ ಪ್ರಧಾನಿ ಮೋದಿ ಗೆಲುವಿಗಾಗಿ ಕೆಲಸ ಮಾಡುತ್ತೇವೆ. ಯಡಿಯೂರಪ್ಪ ಅವರ ಬಳಿ ಯಾವುದೇ ರೀತಿಯ ಒಪ್ಪಂದವನ್ನು ಮಾಡಿಕೊಂಡಿಲ್ಲ. ಯಾವುದೇ ಷರತ್ತು ಇಲ್ಲದೆ ಚುನಾವಣೆಯಲ್ಲಿ ಸಹಕಾರವನ್ನು ನೀಡುತ್ತೇವೆ ಎಂದು ತಿಳಿಸಿದ್ದೇವೆ ಎಂದರು.

ಟಿಕೆಟ್ ಆಕಾಂಕ್ಷಿಯಾಗಿದ್ದ ಎಂ.ಸಿ.ರಘುಚಂದನ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರಿಗೆ ಮಾತು ಕೊಟ್ಟಿದ್ದೇವೆ. ಜೀವ ಹೋದರೂ ಮಾತಿಗೆ ತಪ್ಪಲ್ಲ. ನಮ್ಮ ಮಾತಿಗೆ ಬದ್ಧರಾಗಿ ಗೋವಿಂದ ಎಂ.ಕಾರಜೋಳ ಅವರ ಪರವಾಗಿ ಚುನಾವಣೆ ನಡೆಸುತ್ತೇವೆ ಎಂದರು.

ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸುತ್ತೇವೆ. ಹೊರಗೊಂದು, ಒಳಗೊಂದು ಮಾಡುವುದಿಲ್ಲ. ಅವರು ಹೇಳಿದ ಕಡೆಗಳಲ್ಲಿ ಕೆಲಸ ಮಾಡುತ್ತೇನೆ. ನಾನು ರಾಜ್ಯಸಭೆ, ಪರಿಷತ್ ಆಸೆ ಇಟ್ಟುಕೊಂಡಿಲ್ಲ. ಜನರ ನಡುವೆ ಬೆಳೆದವರು. ಚುನಾವಣೆಯ ಮೂಲಕವೇ ರಾಜಕಾರಣ ಮಾಡುತ್ತೇವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ರೈತ ಮೋರ್ಚಾದ ಅಧ್ಯಕ್ಷ ವೆಂಕೆಟೇಶ್ ಯಾದವ್, ವಕ್ತಾರ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಇದ್ದರು.