ಲೋಕಸಭಾ ಚುನಾವಣೆ ಗೆಲ್ಲುವುದೇ ನಮ್ಮ ಗುರಿ: ಶಾಂತಗೌಡ ಪಾಟೀಲ

| Published : Jan 20 2024, 02:00 AM IST

ಸಾರಾಂಶ

ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ನಿವಾಸದ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ.

ಕನ್ನಡಪ್ರಭ ವಾರ್ತೆ ಇಳಕಲ್ಲ

ವಿಧಾನಸಭೆ ಸೋಲಿನಿಂದ ವಿಚಲಿತಗೊಳ್ಳದೆ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಇನ್ನಷ್ಟು ಬಲಪಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ಮುಂದಿನ ಗುರಿ ಎಂದು ಬಾಗಲಕೋಟೆ ಜಿಲ್ಲೆ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.

ನಗರದ ಬಿಜೆಪಿಯ ಮಾಜಿ ಶಾಸಕ ದೊಡ್ಡನಗೌಡ ಜಿ.ಪಾಟೀಲ ಅವರ ನಿವಾಸದ ಪಕ್ಷದ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪಕ್ಷದ ವರಿಷ್ಠರು ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಎರಡನೇ ಅವಧಿಗೆ ನೇಮಕ ಮಾಡಿ ಜವಾಬ್ದಾರಿ ಹೆಚ್ಚಿಸಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಹಾಗೂ ಮಾಜಿ ಶಾಸಕರನ್ನು ಒಗ್ಗೂಡಿಸಿಕೊಂಡು ಒಮ್ಮತದಿಂದ ಬೂತ್‌ ಮಟ್ಟದಿಂದ ಪಕ್ಷ ಬಲಪಡಿಸುವುದಲ್ಲದೆ ಇದಕ್ಕೆ ಪಕ್ಷದ ಎಲ್ಲ ಹಿರಿಯರು, ಮುಖಂಡರು ಬೆಂಬಲಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ನಿವಾಸಕ್ಕೆ ಆಗಮಿಸಿದ ಜಿಲ್ಲಾಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ, ಪಕ್ಷ ಬಲವರ್ಧನೆಗೆ ಹಾಗೂ ಕಾರ್ಯಚಟುವಟಿಕೆಗಳಿಗೆ ನಮ್ಮ ಬೆಂಬಲ ಹಾಗೂ ಪ್ರೋತ್ಸಾಹವಿದೆ. ನಿಮ್ಮ ಕಾರ್ಯವೈಖರಿ ಮೆಚ್ಚಿ ವರಿಷ್ಠರು ನಿಮಗೆ ಮತ್ತೊಂದು ಅವಧಿಗೆ ಆಯ್ಕೆ ಮಾಡಿದ್ದಾರೆ. ನಿಮ್ಮಿಂದ ಪಕ್ಷ ಇನ್ನಷ್ಟು ಸದೃಢವಾಗಲಿ ಎಂದು ಶುಭ ಕೋರಿದರು.

ಪಕ್ಷದ ಮುಖಂಡರಾದ ಲಕ್ಷ್ಮಣ ಗುರಂ, ಮಹಾಂತಗೌಡ ಪಾಟೀಲ, ವೆಂಕಟೇಶ ಪೋತಾ, ಮಹಾಂತಪ್ಪ ಚನ್ನಿ, ಅರವಿಂದ ಮಂಗಳೂರ, ಸುಗೂರೇಶ ನಾಗಲೋಟಿ, ಚಂದ್ರಶೇಖರ ಏಕಬೋಟೆ, ಗಣೇಶ ಯರಡೋಣಿ, ಗುರುದತ್ತಾತ್ರೇಯ ಗುಳೇದ, ಹನುಮಂತ ತುಂಬದ, ಮಹಾಂತೇಶ ಕಂಪ್ಲಿ, ರಾಜೇಂದ್ರ ಆರಿ, ಮಲ್ಲಯ್ಯ ಮೂಗನೂರಮಠ ಸೇರಿದಂತೆ ಇತರರು ಪಾಲ್ಗೊಂಡಿದ್ದರು.