ಪದವೀಧರರು ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಸಕಾಲಿಕವಾಗಿ ಸ್ಪಂದಿಸಿದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಹಾನಗಲ್ಲ: ಪದವೀಧರರು ಹಾಗೂ ಸರ್ಕಾರಿ ಉದ್ಯೋಗಿಗಳಿಗೆ ಸಕಾಲಿಕವಾಗಿ ಸ್ಪಂದಿಸಿದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಭಾನುವಾರ ಇಲ್ಲಿನ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹಳೆಯ ಪಿಂಚಣಿ ಯೋಜನೆಯೂ ಜಾರಿಗೆ ಬರಲಿದೆ, ಮೋಹನ ಲಿಂಬಿಕಾಯಿ ಅವರ ಆಯ್ಕೆ ಪಕ್ಷಕ್ಕೆ ಶಕ್ತಿ ತುಂಬಲಿದೆ, ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳನ್ನು ತುಂಬದೇ ಕಾಲಹರಣ ಮಾಡಿತು, ನಮ್ಮ ಸರ್ಕಾರ ೭೨ ಸಾವಿರಕ್ಕೂ ಅಧಿಕ ಹುದ್ದೆಗಳನ್ನು ತುಂಬುತ್ತಿದೆ ಎಂದು ಹೇಳಿದರು.ಕಾನೂನು ತಜ್ಞರಾಗಿ, ಉಪನ್ಯಾಸಕರಾಗಿ, ನಿರುದ್ಯೋಗಿಗಳ ಸಮಸ್ಯೆಯ ಪೂರ್ಣ ಅರಿವಿರುವ ಮೋಹನ ಲಿಂಬಿಕಾಯಿ ಪದವೀಧರರು ಹಾಗೂ ಶಿಕ್ಷಕರಿಗೆ ನ್ಯಾಯ ಒದಗಿಸುವಲ್ಲಿ ಸರ್ಕಾರದೊಂದಿಗೆ ಸಹಮತದಿಂದ ಕೆಲಸ ಮಾಡುತ್ತಾರೆ. ಪಕ್ಷದಿಂದ ವಿಧಾನ ಪರಿಷತ್ತಿನಲ್ಲಿದ್ದು ಸರ್ಕಾರಕ್ಕೆ ಶಿಕ್ಷಕರು, ಪದವೀಧರರ ಹಿತಕ್ಕೆ ಸ್ಪಂದಿಸಬಲ್ಲರು. ಈ ಬಾರಿ ಮೋಹನ ಲಿಂಬಿಕಾಯಿ ಅವರ ಆಯ್ಕೆಗೆ ಎಲ್ಲ ಪದವೀಧರರು ಒಟ್ಟಾಗಿ ಬೆಂಬಲಿಸುತ್ತಿದ್ದು, ಒಬ್ಬ ಮತದಾರರೂ ಉಳಿದಂತೆ ಮತದಾನ ಮಾಡುವ ಮೂಲಕ ಲಿಂಬಿಕಾಯಿ ಅವರ ಆಯ್ಕೆಗೆ ಬೆಂಬಲವಾಗಿರಿ ಎಂದು ಮನವಿ ಮಾಡಿದರು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿದ, ಪದವೀಧರರ ಸಮಸ್ಯೆಗಳ ಕುರಿತು ಚರ್ಚಿಸುವವರು ಕಾಂಗ್ರೆಸಿನ ವಿಧಾನ ಪರಿಷತ್ ಸದಸ್ಯರೇ ಹೊರತು ಬಿಜೆಪಿಯವರಲ್ಲ. ಈಗಂತೂ ಬಿಜೆಪಿಯವರು ಚರ್ಚೆಯನ್ನೇ ನಿಲ್ಲಿಸಿದ್ದಾರೆ. ಅವರು ಈಗ ಮೇಲ್ಮನೆಯಲ್ಲಿ ಕಾಲಹರಣಕ್ಕೆ ಬರುತ್ತಿದ್ದಾರೆ. ಎಚ್.ಕೆ. ಪಾಟೀಲ ಅವರ ನಂತರ ವಿಧಾನ ಪರಿಷತ್ತಿಗೆ ಗಟ್ಟಿ ಹುದ್ದರಿಯಾಗಿ ಮೋಹನ ಲಿಂಬಿಕಾಯಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಸದನದಲ್ಲಿ ಪದವೀಧರರು ಶಿಕ್ಷಕರ ಪರವಾಗಿ ಗಟ್ಟಿಯಾಗಿ ನಿಲ್ಲುವ ಮೋಹನ ಲಿಂಬಿಕಾಯಿ ಆಯ್ಕೆಗೆ ಪ್ರಜ್ಞಾವಂತ ಮತದಾರರು ಸಜ್ಜಾಗಿದ್ದಾರೆ. ಅವರ ಆಯ್ಕೆ ಖಚಿತ. ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯ ಮೂಲಕ ಕರ್ನಾಟಕ ಮಕ್ಕಳಿಗೆ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರದ ಅರಾಜಕತೆಗೆ ಈಗ ತಕ್ಕ ಉತ್ತರ ನೀಡಲು ಮೋಹನ್ ಲಿಂಬಿಕಾಯಿ ಅವರನ್ನು ಆಯ್ಕೆ ಮಾಡೋಣ ಎಂದರು.ವಿಧಾನಪರಿಷತ್ ಪಶ್ಚಿಮ ಪದವೀಧರರ ಕ್ಷೇತ್ರದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ನಿರುದ್ಯೋಗಿಗಳಿಗಾಗಿ ೨ ಕೋಟಿ ಹುದ್ದೆ ಸೃಷ್ಟಿ ಮಾಡುವ ಭರವಸೆ ನೀಡಿ, ೧೨ ಸಾವಿರ ಹುದ್ದೆಗಳನ್ನೂ ನೇಮಕ ಮಾಡಲಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ೭೨ ಸಾವಿರ ಹುದ್ದೆ ತುಂಬುತ್ತಿದೆ. ಬಿಜೆಪಿ ಸರ್ಕಾರ ಇದ್ದಾಗ ಏನೂ ಮಾತನಾಡದ ಸಂಕನೂರ ಈಗ ಕಾಂಗ್ರೆಸ್ ನಮ್ಮ ಒತ್ತಾಯಕ್ಕೆ ಹುದ್ದೆ ತುಂಬುತ್ತಿದೆ ಎಂದು ಹೇಳುತ್ತಾರೆ. ಬಿಜೆಪಿ ಇದ್ದಾಗ ಏಕೆ ಈ ಕೆಲಸ ಆಗಲಿಲ್ಲ ಎಂದು ಪ್ರಶ್ನಿಸಿ, ಬಿಜೆಪಿಯವರು ಭಾಷಣ ಮಾಡುತ್ತಾರೆ. ಕಾಂಗ್ರೆಸ್ ಜನಪರ ಕೆಲಸ ಮಾಡುತ್ತದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ನರೇಂದ್ರ ಮೋದಿ ಈಗ ಜನಮನ್ನಣೆ ಕಳೆದುಕೊಂಡಿದ್ದಾರೆ. ಬಿಜೆಪಿಯ ಮುಖಂಡರು ಜೈಲಿಗೆ ಹೋಗಲು ಯೋಗ್ಯರಾದವರಿಗೆ ಕೆಪಿಎಸ್ಸಿ ಜವಾಬ್ದಾರಿಯ ಹುದ್ದೆ ನೀಡಿದರು. ಬಿಜೆಪಿ ಕರ್ಮಕಾಂಡ ಇನ್ನೂ ಬಯಲಿಗೆ ಬರುತ್ತಲಿವೆ. ಈಗ ಬಿಜೆಪಿ ಬಣ್ಣ ಬದಲಾಗಿದೆ. ಮೋಹನ ಲಿಂಬಿಕಾಯಿ ಪದವೀಧರರು ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡುವ ಗಟ್ಟಿ ನಾಯಕರಾಗಿದ್ದು ಅವರನ್ನು ಬೆಂಬಲಿಸಿ ಆಯ್ಕೆ ಮಾಡೋಣ ಎಂದರು.ಕಾಂಗ್ರೆಸ್ ಮುಖಂಡರಾದ ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಹನುಮಂತಪ್ಪ ಮರಗಡಿ, ಖ್ವಾಜಾಮೈನುದ್ದೀನ್ ಜಮಾದಾರ, ವೀರೇಶ ಬೈಲವಾಳ, ವಸಂತಾ ಬಾಗೂರ, ನಿಂಗಪ್ಪ ಪೂಜಾರ, ರಾಘವೇಂದ್ರ ಬಾಸೂರ, ಮಹದೇವಪ್ಪ ಬಾಗಸರ, ಖ್ವಾಜಾಮೊಹಿದ್ದೀನ್ ಅಣ್ಣೀಗೇರಿ, ಯಾಸಿರ್ ಅರಾಫತ್ ಮಕಾನದಾರ ಮೊದಲಾದವರು ಉಪಸ್ಥಿತರಿದ್ದರು.